ಬಾವಿ ನಿರ್ಮಾಣ: ಮಣ್ಣು ಕುಸಿದು ಕಾರ್ಮಿಕ‌ ಸಾವು

ಲೋಕಬಂಧು ನ್ಯೂಸ್ | ಉಡುಪಿ, ಮೇ 22
ಕೊಡವೂರು ಸಮೀಪದ ಗರಡಿಮಜಲಿನಲ್ಲಿ ನೂತನ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಕೊಪ್ಪಳ ಮೂಲದ ರಮೇಶ್ (25) ಮೃತ ಕಾರ್ಮಿಕ.
ಕಾರ್ಕಳ ಸಾಣೂರಿನ ಪ್ರಭಾತ್‌ ಶೆಟ್ಟಿ ಎಂಬವರು ಮಲ್ಪೆ ಉದ್ದಿನಹಿತ್ಲು ಮಧ್ವನಗರ ಎಂಬಲ್ಲಿ ಚೇತನ್‌ ಎಂಬವರ ಜಾಗದಲ್ಲಿ ಬಾವಿ ನಿರ್ಮಾಣ ಕೆಲಸಕ್ಕೆಂದು ಕಾರ್ಕಳ ಬಸ್‌ ನಿಲ್ದಾಣದಿಂದ ಕೊಪ್ಪಳ ಜಿಲ್ಲೆಯ 5 ಮಂದಿ ಕೂಲಿ ಕಾರ್ಮಿಕರನ್ನು ಕರೆತಂದು ಬಾವಿಯಿಂದ ಮಣ್ಣು ತೆಗೆಯುವ ಕೆಲಸ ಮಾಡಿಸುತ್ತಿದ್ದು, ಸಂಜೆ 5 ಗಂಟೆ ಸುಮಾರಿಗೆ ಬಾವಿಯಲ್ಲಿ ಮಣ್ಣು ತೆಗೆಯುವ ಕೆಲಸ ಮಾಡುತ್ತಿರುವಾಗ ಬಾವಿಯ ದಂಡೆಯ ಮಣ್ಣು ಒಮ್ಮೆಲೇ ಕುಸಿದು ರಮೇಶನ ಮೈಮೇಲೆ ಬಿದ್ದು, ಮಣ್ಣಿನಲ್ಲಿ ಹೂತು ಹೋಗಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಲ್ಪೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸ್ಥಳೀಯರು ಹಾಗೂ ಪೊಲೀಸ್‌ ಸಿಬ್ಬಂದಿಗಳ ಸಹಕಾರದೊಂದಿಗೆ ಮಣ್ಣು ತೆರವುಗೊಳಿಸುವ ಕಾರ್ಯ ಮುಂದುವರಿಯಿತು.


ಸುಮಾರು 7-8 ಅಡಿ ಆಳದ ಹೊಂಡದಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದ್ದು, ಕಾರ್ಮಿಕನ ಶವ ಮೇಲಕ್ಕೆತ್ತಲು ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ.


ಸ್ಥಳದಲ್ಲಿ ಮಲ್ಪೆ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.


ಮಲ್ಪೆ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಎಸ್.ಪಿ. ಹರಿರಾಮ್ ಶಂಕರ್ ತಿಳಿಸಿದ್ದಾರೆ.


ಶಾಸಕ ಭೇಟಿ
ಘಟನಾ ಸ್ಥಳಕ್ಕೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.