ಲೋಕಬಂಧು ನ್ಯೂಸ್ | ಕುಂದಾಪುರ, ಮೇ 20
ಸಹಕಾರಿ ರಂಗದ ಪ್ರತಿಷ್ಠಿತ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಸಂಪೂರ್ಣ ಹವಾನಿಯಂತ್ರಿತ 12ನೇ ಶಾಖೆ ಕುಂದಾಪುರದಲ್ಲಿ 22ರಂದು ಶುಭಾರಂಭಗೊಳ್ಳಲಿದೆ. ಕುಂದಾಪುರ ಮುಖ್ಯ ರಸ್ತೆಯಲ್ಲಿನ ಹೋಟೆಲ್ ಪಾರಿಜಾತ ಬಳಿಯ ಶ್ರೀ ನಂದಿಕೇಶ್ವರ ಟವರ್ಸ್'ನಲ್ಲಿ ಆರಂಭಗೊಳ್ಳಲಿರುವ ಶಾಖೆಯನ್ನು ಅಂದು ಬೆಳಿಗ್ಗೆ 10.30 ಗಂಟೆಗೆ ಮಂಗೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ಎಮ್.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸುವರು ಎಂದು ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ ಮೊಳಹಳ್ಳಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್. ಹಾಗೂ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಭಾಗವಹಿಸುವರು.
ವಿಶೇಷ ಬಡ್ಡಿದರ
ನೂತನ ವಿಶಾಲವಾದ ಸುಸಜ್ಜಿತ ಕುಂದಾಪುರ ಶಾಖೆಯಲ್ಲಿ ಆಕರ್ಷಕ ಠೇವಣಿ ಯೋಜನೆಗಳು, ಕಡಿಮೆ ಬಡ್ಡಿದರದಲ್ಲಿ ವಿವಿಧ ಸಾಲ ಸೌಲಭ್ಯಗಳು, ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್, ಆರೋಗ್ಯ ಕಾರ್ಡ್, ಎಲ್ಲಾ ವಿಧದ ವಿಮಾ ಸೇವೆಗಳು, ಮೊಬೈಲ್ ಮೂಲಕವೇ ದೈನಿಕ ಠೇವಣಿ ಸಂಗ್ರಹಣೆ, `0' ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್ಡ್ ಕಾಲ್ ಸೇವೆ ಇತ್ಯಾದಿ ಸೇವೆ ಲಭಿಸಲಿದ್ದು ಶಾಖೆಯ ಉದ್ಘಾಟನಾ ಪ್ರಯುಕ್ತ ಪ್ರತ್ಯೇಕ ಕುಂದಾಪುರ ಶಾಖೆಯ ಗ್ರಾಹಕರಿಗಾಗಿ ವಿಶೇಷ ಠೇವಣಿ ಬಡ್ಡಿದರವನ್ನು ಸಂಸ್ಥೆ ಘೋಷಿಸಿದೆ ಎಂದರು.
ಗ್ರಾಹಕಸ್ನೇಹಿ ಸಂಸ್ಥೆ
ಸಹಕಾರ ಕ್ಷೇತ್ರದಲ್ಲಿ 107 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಂಘ ಪ್ರಸ್ತುತ 23 ಸಾವಿರ ಸದಸ್ಯರನ್ನು ಹೊಂದಿದ್ದು, 662 ಕೋಟಿ ಠೇವಣಿ ಹಾಗೂ ರೂ. 528 ಕೋಟಿ ಸದಸ್ಯರ ಹೊರಬಾಕಿ ಸಾಲ ಹೊಂದಿದೆ. 113.24 ಕೋಟಿ ನಿಧಿ ಹಾಗೂ ರೂ. 284.07 ಕೋಟಿ ಹೂಡಿಕೆ ಹೊಂದಿದ್ದು, ಒಟ್ಟು ರೂ. 795 ಕೋಟಿ ದುಡಿಯುವ ಬಂಡವಾಳ ಹೊಂದಿದೆ. 2025-26ನೇ ಸಾಲಿನಲ್ಲಿ 4,062.29 ಕೋಟಿ ವಾರ್ಷಿಕ ವಹಿವಾಟು ನಡೆಸಿ 18.13 ಕೋ. ರೂ. ಲಾಭ ಗಳಿಸಿದೆ.
ಸಹಕಾರ ಕ್ಷೇತ್ರದಲ್ಲಿನ ಅತ್ಯುತ್ತಮ ಸೇವೆಗಾಗಿ ಸಂಸ್ಥೆ 2 ಬಾರಿ ರಾಷ್ಟ್ರ ಪ್ರಶಸ್ತಿ, 9 ರಾಜ್ಯ ಹಾಗೂ 19 ಜಿಲ್ಲಾ ಮಟ್ಟದ ಪ್ರಶಸ್ತಿ ಮತ್ತು 72ನೇ ಅಖಿಲ ಭಾರತ ಸಹಕಾರ ಸಪ್ತಾಹ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ 'ಸಹಕಾರ ಮಾಣಿಕ್ಯ' ಗೌರವ ಪಡೆದಿದೆ.
ಉತ್ತಮ ಆಡಳಿತ, ಆರ್ಥಿಕ ಶಿಸ್ತು, ಸದಸ್ಯ ಸ್ನೇಹಿ ಯೋಜನೆಗಳು ಹಾಗೂ ಪಾರದರ್ಶಕ ಕಾರ್ಯವೈಖರಿಗಾಗಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದ್ದು ಗ್ರಾಹಕ ವಿಶ್ವಾಸ, ತಂತ್ರಜ್ಞಾನ ಆಧರಿತ ಸೇವೆ ಹಾಗೂ ಸಾಮಾಜಿಕ ಬದ್ಧತೆ ಮೂಲಕ ಸಂಸ್ಥೆ ಜನಮನ ಗೆದ್ದಿದೆ.
ಸಂಸ್ಥೆ ವ್ಯವಹಾರ ಲಾಭದೊಂದಿಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿದ್ದು, ಪ್ರತಿವರ್ಷ ಸುಮಾರು 25 ಲಕ್ಷ ರೂ. ಮೊತ್ತವನ್ನು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಮೀಸಲಿಡುತ್ತಿದೆ ಎಂದು 'ಸಹಕಾರ ರತ್ನ' ಜಯಕರ ಶೆಟ್ಟಿ ವಿವರಿಸಿದರು.
ಡಿಜಿಟಲೀಕರಣದ ಭಾಗವಾಗಿ ಸಂಸ್ಥೆ `ಚೇತನಾ ಮೊಬೈಲ್ ಆ್ಯಪ್' ಪರಿಚಯಿಸಿದ್ದು ಗ್ರಾಹಕರು ತಮ್ಮ ಖಾತೆ ವಿವರ ವೀಕ್ಷಣೆ, ಹಣ ವರ್ಗಾವಣೆ, ಸಾಲ ಖಾತೆ ನಿರ್ವಹಣೆ ಹಾಗೂ ಸಂಘದ ನೂತನ ಯೋಜನೆಗಳ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು ಎಂದರು.
ಸೊಸೈಟಿ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ಮತ್ತು ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಶಾಖಾ ವ್ಯವಸ್ಥಾಪಕ ಸಮರ್ಥ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿದ್ದರು.

