ಲೋಕಬಂಧು ನ್ಯೂಸ್ | ಉಡುಪಿ, ಮೇ 20
ಯಾರಲ್ಲಿ ನಿಷ್ಕಲ್ಮಷ ಶುದ್ಧ ಭಕ್ತಿ ಇದೆಯೋ ಅವರಿಗೆ ಭಗವಂತ ಒಲಿಯುತ್ತಾನೆ. ಭಕ್ತಿ ಇಲ್ಲದೇ ಎಷ್ಟೇ ಶಾಸ್ತ್ರ, ಪ್ರವಚನ ಮಾಡಿದರೂ ಅದು ನಿರರ್ಥಕ. ಭಕ್ತಿಯೊಂದೇ ಭಗವದೊಲುಮೆಗೆ ಸಾಧನ ಎಂದು ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಮಲ್ಪೆ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಮಲ್ಪೆ ಸಮುದ್ರತೀರದ ಆನಂದ ಶರಧಿ ನಿವೇಶನದಲ್ಲಿ ಮೇ 31ರ ವರೆಗೆ ನಡೆಯಲಿರುವ ಅಂತರ ಜಿಲ್ಲಾ ಭಜನಾ ಸ್ಪರ್ಧೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಆಚಾರ್ಯ ಮಧ್ವರು ಭಕ್ತಿ ಸಿದ್ಧಾಂತದ ಪ್ರತಿಪಾದಕರು. ದೇವರು ಭಕ್ತಿಗೆ ಒಲಿಯುತ್ತಾನೆ ಎನ್ನುವವುದನ್ನು ಮಧ್ವಾಚಾರ್ಯರು ತಿಳಿಸಿಕೊಟ್ಟಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸುವ ನಿಟ್ಟಿನಲ್ಲಿ ಮಲ್ಪೆಯನ್ನು ಅಧ್ಯಾತ್ಮಿಕ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು.
ಮಲ್ಪೆ ಜ್ಞಾನ ನೀಡುವ ಕೇಂದ್ರ ಆಗಬೇಕು. ಆಚಾರ್ಯ ಮಧ್ವರ ಜ್ಞಾನ ಕೇಂದ್ರ ಆಗಬೇಕು. ಅದಕ್ಕೆ ನಾವೆಲ್ಲರೂ ಪ್ರಯತ್ನಿಸೋಣ ಎಂದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಸನಾತನ ಸಂಸ್ಕೃತಿಗೆ ಇನ್ನಷ್ಟು ಒತ್ತುನೀಡುವ ನಿಟ್ಟಿನಲ್ಲಿ ಭಜನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಮಲ್ಪೆ ಕಡಲ ತೀರದಲ್ಲಿ ಇನ್ನಷ್ಟು ಧಾರ್ಮಿಕ ಕಾರ್ಯಕ್ರಮಗಳು ಮೂಡಿಬರಲಿ. ರಾಮನವಮಿ ಅಥವಾ ಹನುಮ ಜಯಂತಿ ಕಾರ್ಯಕ್ರಮವನ್ನು ಮಲ್ಪೆ ಕಡಲ ತೀರದಲ್ಲಿ ಹಮ್ಮಿಕೊಳ್ಳುವಂತೆ ಉಭಯ ಶ್ರೀಪಾದರಲ್ಲಿ ವಿನಂತಿಸಿದರು.
ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಭಜನೆಗಳಲ್ಲೂ ಈಗ ಹೊಸತನ ಬಯಸುತ್ತಿದ್ದಾರೆ. ಮೊದಲೆಲ್ಲಾ ದೇವರನ್ನು ಒಲಿಸಿಕೊಂಡು ಭಜನೆ ಹಾಡುತ್ತಿದ್ದರು. ಈಗ ಸಾಹಿತಿಗಳೂ ಭಜನೆ ಬರೆಯುವ ಕಾಲ ಬಂದಿದೆ. ಹೊಸತು ಎನ್ನುವ ಗೀಳಿನಿಂದ ಸನಾತನ ಧರ್ಮ ಕೊರಗುತ್ತಿದೆ. ಹಾಗಾಗಿ ದಾಸ ಸಾಹಿತ್ಯವನ್ನು ಜೀವಂತವಾಗಿಡುವಲ್ಲಿ ಇಂಥ ಭಜನಾ ಕಾರ್ಯಕ್ರಮಗಳ ಆವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಮಧ್ವಾಚಾರ್ಯರಿಗೆ ಶ್ರೀಕೃಷ್ಣನ ಮೂರ್ತಿ ಲಭಿಸಿದ ಮಲ್ಪೆ ಕಡಲ ತೀರದಲ್ಲಿ ಮಧ್ವಾಚಾರ್ಯರ ಕುರುಹಾಗಿ ಮಧ್ವಾಚಾರ್ಯ ಥೀಮ್ ಪಾರ್ಕ್ ನಿರ್ಮಾಣದ ಅವಶ್ಯಕತೆ ಇದೆ. ಮಧ್ವಾಚಾರ್ಯ ಥೀಂ ಪಾರ್ಕ್ ನಿರ್ಮಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಪ್ರಯತ್ನವಾಗಬೇಕು. ಸ್ವಾಮೀಜಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಪ್ರಯತ್ನವಾಗಲಿ ಎಂದರು.
ಈ ಸಂದರ್ಭದಲ್ಲಿ ಭಜನಾ ಸಾಧಕ ಜಯಪ್ರಕಾಶ್ ಆರ್. ಕಿದಿಯೂರು ಅವರನ್ನು ಅದಮಾರು ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಉಜ್ವಲ್ ಡೆವಲಪರ್ಸ್'ನ ಪುರುಷೋತ್ತಮ ಶೆಟ್ಟಿ, ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್, ನಗರಸಭಾ ಮಾಜಿ ಸದಸ್ಯ ರಮೇಶ್ ಕಾಂಚನ್, ಮೊಗವೀರ ಮುಖಂಡ ಸಾಧು ಸಾಲ್ಯನ್, ಕೊರಗ ಸಮಾಜ ಪ್ರಮುಖ ಗಣೇಶ ಬಾರ್ಕೂರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗದ ಕಾರ್ಯವಾಹ ಡಾ. ವಾದಿರಾಜ್, ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್, ಗಾಯಕ ಮಧೂರು ಪಿ.ಬಾಲಸುಬ್ರಹ್ಮಣ್ಯ, ದಿನೇಶ್ ಪುತ್ರನ್ ಉಪಸ್ಥಿತರಿದ್ದರು.
ವಿದ್ವಾನ್ ಗುರುಪ್ರಸಾದ್ ರಾವ್ ತಂಡದಿಂದ ವೇದಘೋಷ, ಪ್ರಾದೇಶ್ ಆಚಾರ್ಯ ಬೆಂಗಳೂರು ಅವರಿಂದ ಪ್ರಾರ್ಥನೆ ನಡೆಯಿತು.
ಸಂಘಟನಾ ಕಾರ್ಯದರ್ಶಿಗಳಾದ ಗೋವಿಂದರಾಜ್ ಸ್ವಾಗತಿಸಿ, ವಿಜಯ ಕೊಡವೂರು ವಂದಿಸಿದರು. ವಿದ್ವಾನ್ ಷಣ್ಮುಖ ಹೆಬ್ಬಾರ್ ನಿರೂಪಿಸಿದರು.
.jpg)
.jpg)
.jpg)
.jpg)
.jpg)
.jpg)
.jpg)
.jpg)