ಲೋಕಬಂಧು ನ್ಯೂಸ್ | ಭಟ್ಕಳ, ಮೇ 25
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿ ಬಳಿ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋಗಿ ಸಂಭವಿಸಿದ ಭೀಕರ ಜಲ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ನೀರಿನ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಮಾದೇವ ನಾಯ್ಕ ಎಂಬವರ ಮೃತದೇಹ ಸೋಮವಾರ ಪತ್ತೆಯಾಗುವುದರೊಂದಿಗೆ ದುರಂತದ ಭೀಕರತೆ ಮತ್ತಷ್ಟು ಹೆಚ್ಚಾಗಿದೆ.ನದಿಯ ನೀರಿನ ಸೆಳೆತಕ್ಕೆ ಸಿಲುಕಿದ್ದ ಒಟ್ಟು 11 ಜನರ ಪೈಕಿ ಭಾನುವಾರ 10 ಜನರ ಮೃತದೇಹ ಹೊರತೆಗೆಯಲಾಗಿತ್ತು. ನಾಪತ್ತೆಯಾಗಿದ್ದ ಕೊನೆಯ ವ್ಯಕ್ತಿ ಮಾದೇವನ ಪತ್ತೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಜಂಟಿಯಾಗಿ ತೀವ್ರ ಕಾರ್ಯಾಚರಣೆ ನಡೆಸಿತ್ತು. ಸುದೀರ್ಘ ಹುಡುಕಾಟದ ಬಳಿಕ ಮಾದೇವ್ ಶವ ಪತ್ತೆಯಾಗಿದೆ.
ಇಬ್ಬರು ಮಹಿಳೆಯರ ರಕ್ಷಣೆ
ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದಾಗ ದಿಢೀರನೆ ನೀರಿನ ಹರಿವು ಮತ್ತು ಅಬ್ಬರ ಹೆಚ್ಚಾದ ಕಾರಣ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಮಹಿಳೆಯರನ್ನು ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಸದ್ಯ ರಕ್ಷಿಸಲ್ಪಟ್ಟ ಮಹಿಳೆಯರು ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಒಂದೇ ಘಟನೆಯಲ್ಲಿ ಒಟ್ಟು 11 ಮಂದಿ ಜಲ ಸಮಾಧಿಯಾಗಿರುವುದು ಇಡೀ ಜಿಲ್ಲೆಯನ್ನು ಕಣ್ಣೀರಿಡುವಂತೆ ಮಾಡಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಳ್ವೆಕೋಡಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಸ್ಥಳಕ್ಕೆ ಪೊಲೀಸ್ ಉನ್ನತಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.