ಲೋಕಬಂಧು ನ್ಯೂಸ್ | ಪಡುಬಿದ್ರಿ, ಮೇ 1
ಸಂಪೂರ್ಣ ನವೀಕರಣಗೊಂಡು ಶಿಲಾಮಯ ದೇವಳದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿ ದೇವಳಗಳಲ್ಲಿ ಮೇ 2ರಂದು ಶನಿವಾರ ಮತ್ತು ಮೇ 3ರಂದು ಭಾನುವಾರ ಬ್ರಹ್ಮಕುಂಭಾಭಿಷೇಕ ನೆರವೇರಲಿದೆ.
ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಕೊಡವೂರು ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ಅರ್ಚಕ ಎಚ್.ಪದ್ಮನಾಭ ಭಟ್ ಮತ್ತು ವೈ.ಗುರುರಾಜ್ ಭಟ್ ಉಸ್ತುವಾರಿಯಲ್ಲಿ ಋತ್ವಿಜ ಸಮೂಹ ಹಾಗೂ ಭಗವದ್ಭಕ್ತರ ಕೂಡುವಿಕೆಯಲ್ಲಿ ಶನಿವಾರ ಶ್ರೀ ಮಹಾಗಣಪತಿ ಹಾಗೂ ಆದಿತ್ಯವಾರ ಶ್ರೀಮಹಾಲಿಂಗೇಶ್ವರ ದೇವರ ಬ್ರಹ್ಮಕಲಶಾಭಿಷೇಕ ಮಹೋತ್ಸವ ನಡೆಯಲಿದೆ.
ಮೇ 2ರ ಶನಿವಾರದಂದು ದಿವಾಘಂಟೆ 2ರಿಂದ ಅಷ್ಟೋತ್ತರಶತ ನಾರಿಕೇಲ ಗಣಯಾಗ, ಮಹಾರುದ್ರಯಾಗ, ಗಣಪತಿ ದೇವರ ತತ್ವಕಲಶ ಪ್ರತಿಷ್ಠೆ, ತತ್ವಯಾಗ ಈಶ್ವರ ದೇವರ ಬ್ರಹ್ಮಕುಂಭ ಸಹಿತ ಸಹಸ್ರದ್ರವ್ಯ ಕಲಶಾಧಿವಾಸ, ಅಧಿವಾಸಯಾಗ, ಕಲಶಾಭಿಷೇಕ ಆರಂಭಗೊಂಡು ದಿವಾ ಘಂಟೆ 8.05ಕ್ಕೆ ಒದಗುವ ವೃಷಭಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಲಿದೆ.
ಜಗದ್ಗುರು ಶ್ರೀಮಧ್ವಾಚಾರ್ಯ ಮೂಲಮಹಾಸಂಸ್ಥಾನ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ದಿವ್ಯಸಾನಿಧ್ಯ ಮತ್ತು ಸಂಸ್ಥಾನ ಪೂಜೆ ನೆರವೇರಲಿದೆ.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪ್ರಕಾಶ ಶೆಟ್ಟಿ, ದೇವಳದ ಆನುವಂಶಿಕ ಮೊಕ್ತೇಸರರಾದ ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳ್, ಪೇಟೆಮನೆ ಭವಾನಿಶಂಕರ್ ಹೆಗ್ಡೆ, ಕೊರ್ನಾಯ ಶ್ರಿಪತಿ ರಾವ್, ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಎಚ್.ಪದ್ಮನಾಭ ಭಟ್ ಮತ್ತು ವೈ.ಗುರುರಾಜ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುರಳೀನಾಥ ಶೆಟ್ಟಿ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಮುಂಬೈ, ಬೆಂಗಳೂರು ಸಹಿತ ವಿವಿಧ ಉಪಸಮಿತಿಗಳ ಸಂಚಾಲಕರು, ಸರ್ವ ಸದಸ್ಯರು ಊರಿನ ಹತ್ತು ಸಮಸ್ತರು, ಭಕ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.
