ಮೇ 28: ಬೊಗಸೆ ಭತ್ತ ಬೀಜ ಪ್ರದಾನ

ಲೋಕಬಂಧು ನ್ಯೂಸ್ | ಉಡುಪಿ, ಮೇ 27
ಸೋದೆ ವಾದಿರಾಜ ಮಠ ಮತ್ತು ತಿರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಸಂಸ್ಥೆ ಆಶ್ರಯದಲ್ಲಿ ಮೇ 28ರಂದು ರಥಬೀದಿಯ ಸೋದೆ ಮಠದಲ್ಲಿ ಬೊಗಸೆ ಭತ್ತ ಬೀಜ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕೃಷಿ ಪ್ರಯೋಗ ಪರಿವಾರದ ಶ್ರೀವತ್ಸ ತಿಳಿಸಿದರು.
ಮಂಗಳವಾರ ಸೋದೆ ಮಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಅಳಿವಿನಂಚಿನಲ್ಲಿರುವ ಭತ್ತದ ವಿವಿಧ ತಳಿಗಳನ್ನು ಯುವಜನತೆಗೆ ಪರಿಚಯಿಸುವುದರೊಂದಿಗೆ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದ್ದು, 2028ರಲ್ಲಿ ನಡೆಯುವ ಸೋದೆ ಪರ್ಯಾಯ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ 365 ವಿಧದ ಭತ್ತದ ತಳಿಯ ಅನ್ನ ನೈವೇದ್ಯ ಸಮರ್ಪಿಸುವ ಆಶಯ ಹೊಂದಲಾಗಿದೆ.


ಅದಕ್ಕಾಗಿ ಬೆಳಗಾವಿ, ಹಾಸನ, ಶಿವಮೊಗ್ಗ, ಉಡುಪಿ, ದ.ಕ., ದಾವಣಗೆರೆ ಸೇರಿದಂತೆ 10 ಜಿಲ್ಲೆಗಳ ಸುಮಾರು 200 ಮಂದಿ ರೈತರಿಗೆ ಸುಮಾರು 300 ಬಗೆಯ ವಿವಿಧ ತಳಿಗಳ ಭತ್ತದ ಬೀಜ ವಿತರಿಸಲಾಗುವುದು. ಮುಂದಿನ ಹಂಗಾಮಿನಲ್ಲಿ ಆ ಬೀಜ ಬಿತ್ತನೆ ಮಾಡಿ, ಸಾವಯವ ಪದ್ಧತಿಯಲ್ಲೇ ಬೆಳೆದು ಕೃಷ್ಣಮಠಕ್ಕೆ ತೊಂದೊಪ್ಪಿಸಬೇಕು ಎಂಬುದು ಯೋಜನೆಯ ಆಶಯ ಎಂದರು.


ಸಾನ್ನಿಧ್ಯ ವಹಿಸಿದ್ದ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ತಮ್ಮ ಪರ್ಯಾಯ ಅವಧಿಯಲ್ಲಿ ಶುದ್ಧ ನೈವೇದ್ಯ ಸಮರ್ಪಣಮ್ ಯೋಜನೆ ಮೂಲಕ ಸಾವಯವ ಕೃಷಿಗೆ ಪ್ರೋತ್ಸಾಹ, ಭತ್ತದ ತಳಿ ಸಂರಕ್ಷಣೆ ಹಾಗೂ ರೈತರಿಗೆ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕೃಷ್ಣನ ಮಹಾನೈವೇದ್ಯಕ್ಕೆ ಮಾತ್ರ ವಿವಿಧ ತಳಿಗಳ ಭತ್ತದ ಅನ್ನ ಸಮರ್ಪಿಸಲಿದ್ದು, ಆಗಮಿಸುವ ಭಕ್ತಾದಿಗಳಿಗೆ ಸಾವಯವ ಕೃಷಿಯ ಅಕ್ಕಿಯ ಅನ್ನ ಪ್ರಸಾದ ನೀಡಲು ಯೋಜಿಸಲಾಗಿದೆ ಎಂದರು.


ಕೃಷಿ ಪ್ರಯೋಗ ಪರಿವಾರದ ಅರುಣ್, ದಿನೇಶ ಮೊದಲಾದವರಿದ್ದರು.