ಲೋಕಬಂಧು ನ್ಯೂಸ್ | ಉಡುಪಿ, ಮೇ 23
ಇತ್ತೀಚಿನ ದಿನಗಳಲ್ಲಿ ಕೇವಲ ಸ್ಪರ್ಧೆಗಳಿಗಾಗಿ ಕಥೆಗಳನ್ನು ಬರೆಯುವ ಗೀಳು ಹೆಚ್ಚಾಗಿದೆ. ಕಥೆಗಾರರ ಉದ್ದೇಶ ಪ್ರಶಸ್ತಿ, ಬಹುಮಾನ ಗಳಿಸುವುದಕ್ಕಿಂತ ಆನಂದವೇ ಮೂಲ ಧ್ಯೇಯವಾಗಿರಬೇಕು ಎಂದು ಹಿರಿಯ ಸಾಹಿತಿ, ಕಥೆಗಾರ ಡಾ.ಪ್ರೇಮಶೇಖರ ಕಿವಿಮಾತು ಹೇಳಿದರು.
ನುಡಿತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾಟ್ಸಾಪ್ ಬಳಗ ಆಶ್ರಯದಲ್ಲಿ ರಥಬೀದಿ ಪೇಜಾವರ ಮಠದ ಶ್ರೀರಾಮ ವಿಠಲ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ನುಡಿಸಂಭ್ರಮ ರಾಜ್ಯ ಮಟ್ಟದ ನಾಲ್ಕನೆಯ ವಾರ್ಷಿಕೋತ್ಸವದಲ್ಲಿ ಶನಿವಾರ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.
ನವೋದಯ ಸಾಹಿತ್ಯ ಬದುಕಿನ ಒಳ್ಳೆಯ ಮುಖ ಹೇಳಿದರೆ ಪ್ರಗತಿಶೀಲ ಸಾಹಿತ್ಯ ಬದುಕಿನ ಅಭಿವೃದ್ಧಿಯ ಆಶಯ ಹೊಂದಿತ್ತು. ನವ್ಯ ಕಾವ್ಯದಲ್ಲಿ ಎಡ ಸಾಹಿತ್ಯ ಬಂತು, ಬಂಡಾಯ ಪ್ರಗತಿಶೀಲರ ಮುಂದುವರಿದ ಭಾಗವಾಯಿತು. ಇಂದಿನ ಸಾಹಿತ್ಯ ಸ್ಪರ್ಧೆ ಮತ್ತು ಅಜೆಂಡಾಗಳ ಕಾಲ. ಅಸಂವೇದನಾಶೀಲ ಕಥೆಗಾರರ ಪ್ರಾಬಲ್ಯದಲ್ಲಿ ನಾವೂ ಅವರಂತೆ ಆಗುವುದು ಸಾಧ್ಯವಿಲ್ಲ. ಪ್ರಶಸ್ತಿ ಆಸೆಯಿಂದ ಬರೆಯುವ ಕಥೆಗಾರ ಉತ್ತಮ ಕಥೆಗಾರನಾಗಲಾರ. ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಲೇಖಕಿಯರೇ, ಜೋಪಾನ!
ಸಾಹಿತ್ಯದ ಪಯಣದ ಹಾದಿ ಹೂವಿನ ಹಾಸಿಗೆಯಲ್ಲ, ಎಚ್ಚರಿಕೆಯಿಂದ ನಡೆಯಬೇಕು. ಕನ್ನಡ ಸಾಹಿತ್ಯ ಕಿರಿದಾದ ಕೊಲ್ಲಿಯಾಗಿದೆ. ಇಲ್ಲಿ ಶಾರ್ಕ್'ಗಳು, ಹಾವುಗಳೂ ಇವೆ. ಲೇಖಕಿಯರು ಜೋಪಾನವಾಗಿರಬೇಕು. ಅಮಾಯಕ ಹೆಣ್ಣುಮಕ್ಕಳು ಪ್ರಚಾರ, ಪ್ರಸಿದ್ಧಿ ನೆಪದಲ್ಲಿ ಮೋಸಗಾರರ ಜಾಲಕ್ಕೆ ಬೀಳುವ ಭಯವಿದೆ ಎಂದು ಭೀತಿ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ಹಾಸ್ಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್, ಆಂಗ್ಲ ಭಾಷೆಯ ಪ್ರಾಬಲ್ಯ ಕಡಿಮೆ ಮಾಡಲು ಸಾಧ್ಯವಾದಲ್ಲೆಲ್ಲ ಪ್ರಯತ್ನಪೂರ್ವಕವಾಗಿಯಾದರೂ ಕನ್ನಡ ಮಾತನಾಡಬೇಕು, ಬರೆಯಬೇಕು. ಭಾಷೆಯ ಉಳಿವಿಗಾಗಿ ಶ್ರಮಪಡಬೇಕು. ತಂದೆ- ತಾಯಿ ತಮ್ಮ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಿದರೆ ಕನ್ನಡ ಉಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜನರ ಮನದಲ್ಲಿ ಉಳಿಯುವ ಸಾಹಿತ್ಯ ರಚನೆಯಾಗಬೇಕು ಎಂದವರು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನುಡಿತೋರಣದ ವೆಂಕಟೇಶ ಶೇಷಾದ್ರಿ ಮತ್ತು ರಾ.ಸು. ವೆಂಕಟೇಶ್ ಇದ್ದರು.
ನುಡಿತೋರಣ ಬಳಗದ ಜಿ.ಎಸ್. ಸರೋಜಾ ಸ್ವಾಗತಿಸಿ, ರಾಧಿಕಾ ಕಾಮತ್ ಉಡುಪಿ ವಂದಿಸಿದರು. ಸಂಚಾಲಕ ಶ್ರೀಕಾಂತ ಪತ್ರೆಮರ ಪ್ರಸ್ತಾವನೆಗೈದರು. ಆಶ್ವಿಜಾ ಶ್ರೀಧರ್ ಮತ್ತು ತಂಡದವರಿಂದ ನಾಡಗೀತೆ, ಪರಿಮಳಾ ಮಹೇಶ್ ರಾವ್ ಅವರಿಂದ ಪ್ರಾರ್ಥನಾ ನೃತ್ಯ ನಡೆಯಿತು. ಛಾಯಾ ಭಗವತಿ ಬೆಂಗಳೂರು ಮತ್ತು ವಿಜಯಲಕ್ಷ್ಮಿ ಕಟೀಲು ನಿರೂಪಿಸಿದರು. ಚೇಂಪಿ ದಿನೇಶ್, ಸುಮನಾ ಹೇರ್ಳೆ ಮತ್ತು ಪರ್ಕಳ ಕ್ಷಮಾ ರಘುರಾಮ್ ಬೀದರ್ ಪರಿಚಯಿಸಿದರು.
ನುಡಿಭೂಷಣ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಬೆಂಗಳೂರಿನ ರಾಧಾ ಟೇಕಲ್, ಉಡುಪಿಯ ಶೋಭಾ ಹರಿಪ್ರಸಾದ್ ಮತ್ತು ಚಿತ್ರದುರ್ಗದ ಶೈಲಾ ಜಯಕುಮಾರ್ ಅವರಿಗೆ `ನುಡಿಭೂಷಣ ಪ್ರಶಸ್ತಿ' ಪ್ರದಾನ ಮಾಡಲಾಯಿತು.
ಪುಸ್ತಕ ಅನಾವರಣ
ಶ್ರೀಕಾಂತ ಪತ್ರೆಮರ ಅವರ ಚೊಚ್ಚಲ ಕವನ ಸಂಕಲನ 'ವ್ಯಕ್ತ ಪತ್ರೆಗಳು', ಮಧು ವಸ್ತ್ರದ ಅವರ `ಚೈತ್ರದ ಚಿಗುರು', ವಿಜಯ ನಿರ್ಮಲ ಅವರ `ಕನ್ನಡದ ಆಧುನಿಕ ಸಾಧಕಿಯರು', ಜಯಶ್ರೀ ರಾಜು ಸಂಪಾದಿತ ಕೃತಿ 'ನುಡಿಕಥಾಮಾಲಾ' ಕಿರಣ್ ಹಿರಿಸಾವೆ ಅವರ `ಆ ಐದು ನಿಮಿಷಗಳು' ಮತ್ತು ಅನುವಾದಿತ ಕೃತಿ `ವೋ ಪಾಂಚ್ ಮಿನಟ್' ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು.(ಚಿತ್ರ: ನರಸಿಂಹಮೂರ್ತಿ ರಾವ್, ಮಣಿಪಾಲ)
.jpg)
.jpg)
.jpg)