ಲೋಕಬಂಧು ನ್ಯೂಸ್ | ಉಡುಪಿ, ಮೇ 2
ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ 2025ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಮತ್ತು ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಹೆಸರಿನ ದತ್ತಿನಿಧಿ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭ ಮೇ 3ರಂದು ಅಪರಾಹ್ನ 4 ಗಂಟೆಗೆ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಳರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಪ್ರಶಸ್ತಿ ಪ್ರದಾನ ಹಾಗೂ ಕಿರು ಪರಿಚಯ ಪುಸ್ತಕ ಬಿಡುಗಡೆ ಮಾಡುವರು. ಶಾಸಕ ಯಶಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸುವರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಕಾಡೆಮಿ ಪ್ರಕಟಿಸಿದ ಪುಸ್ತಕಗಳನ್ನು ಅನಾವರಣಗೊಳಿಸುವರು. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ನಿ.ಬೀ. ವಿಜಯ ಬಲ್ಲಾಳ್ ಸಾಕ್ಷ್ಯಚಿತ್ರ ಬಿಡುಗಡೆ ಮಾಡುವರು ಎಂದರು.
ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಡಾ. ಕೆ. ಎಂ. ರಾಘವ ನಂಬಿಯಾರ್, ಐವರು ಗೌರವ ಪ್ರಶಸ್ತಿ ಪುರಸ್ಕೃತರಾದ ರೆಂಜಾಳ ರಾಮಕೃಷ್ಣ ರಾವ್, ವಿಷ್ಣು ಮಂಜಪ್ಪ ಆಚಾರಿ ಬಳ್ಕೂರು, ಡಿ. ಮನೋಹರ್ ಕುಮಾರ್, ಮುರಲಿ ಕಡೆಕಾರ್ ಮತ್ತು ರಮೇಶ್, ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಾದ ಸಣ್ಣಮಲ್ಲಯ್ಯ, ಲಕ್ಷ್ಮಣ ಗೌಡ ಬೆಳಾಲ್, ದಾಸಪ್ಪ ಗೌಡ ಗೇರುಕಟ್ಟೆ, ಎ.ಜಿ. ನಾಗರಾಜು, ದಾಸನಡ್ಕ ರಾಮ ಕುಲಾಲ್, ರಾಜೀವ್ ಶೆಟ್ಟಿ ಹೊಸಂಗಡಿ, ಕೇಶವ ಶಕ್ತಿನಗರ, ಸದಾಶಿವ ಕುಲಾಲ್, ಬೆಳ್ಳಾರೆ ಮಂಜುನಾಥ ಭಟ್, ಜಿ.ಕೆ. ಶ್ರೀನಿವಾಸ ಸಾಲಿಯಾನ್, ಹಾಗೂ ದಿ.ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಹೆಸರಿನಲ್ಲಿ ನೀಡುವ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ ದೇವದಾಸ ರಾವ್ ಕೊಡ್ಲಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪುರಸ್ಕೃತರಾದ ಅಶೋಕ ಹಾಸ್ಯಗಾರ, ಕೆರೆಮನೆ ಶಿವಾನಂದ ಹೆಗಡೆ, ಮಣಿಪಾಲ್ ಯುನಿವರ್ಸಲ್ ಪ್ರೆಸ್ ಪ್ರಶಸ್ತಿ ಸ್ವೀಕರಿಸುವರು.
ಮಧ್ಯಾಹ್ನ 1ರಿಂದ 3ರ ವರೆಗೆ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ ಕಲಾವಿದರಿಂದ 'ಬಬ್ರುವಾಹನ ಕಾಳಗ' ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಶಿವರಾಮ ಶೆಟ್ಟಿ ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಅಕಾಡಮಿ ರಿಜಿಸ್ಟ್ರಾರ್ ನಮ್ರತಾ ಎನ್. ಹಾಗೂ ಸದಸ್ಯ ಕೃಷ್ಣಪ್ಪ ಪೂಜಾರಿ ಕಿನ್ಯಾ ಉಪಸ್ಥಿತರಿದ್ದರು.