ಲೋಕಬಂಧು ನ್ಯೂಸ್ ಉಡುಪಿ, ಮೇ 4
ನಗರದ ಪ್ರತಿಷ್ಠಿತ ಗಾಂಧಿ ಆಸ್ಪತ್ರೆ ತನ್ನ 31ನೇ ವರ್ಷದ ಪೂರ್ಣೋತ್ಸವವನ್ನು ಮೇ 5ರಂದು ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ಸಿದ್ಧವಾಗಿದೆ.ಬೆಳಗ್ಗೆ 9 ಗಂಟೆಯಿಂದ 12.30ರ ವರೆಗೆ ಗಾಂಧಿ ಆಸ್ಪತ್ರೆ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ವಿನಂತಿಸಲಾಗಿದೆ.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಉದ್ಘಾಟಿಸಲಿದ್ದು ಭಾರತೀಯ ವೈದ್ಯಕೀಯ ಸಂಘದ ಉಡುಪಿ- ಕರಾವಳಿ ಘಟಕ ಅಧ್ಯಕ್ಷ ಡಾ.ಅಶೋಕ್ ಕುಮಾರ್ ಕಾಮತ್, ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ಗಾಂಧಿ ಆಸ್ಪತ್ರೆಯ ಸ್ಥಾಪಕ ಹರಿಶ್ಚಂದ್ರ ಹಾಗೂ ಜಿಲ್ಲಾ ರಕ್ತನಿಧಿ ಮುಖ್ಯಸ್ಥೆ ಡಾ.ವೀಣಾ ಕುಮಾರಿ ಉಪಸ್ಥಿತರಿರುವರು.
ಛಾಯಾಚಿತ್ರ ಪ್ರದರ್ಶನ
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ ಅವರಿಂದ 'ಬಹುಚಿತ್ರ ಜಗತ್' ಛಾಯಾಚಿತ್ರಗಳ ಪ್ರದರ್ಶನವಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ತಂತ್ರಿ ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿದ್ದಾರೆ. ಪ್ರದರ್ಶನದಲ್ಲಿ ಛಾಯಾಚಿತ್ರಗಳ ಮಾರಾಟದಿಂದ ಸಂಗ್ರಹವಾಗುವ ಮೊತ್ತವನ್ನು 'ಹೋಮ್ ಡಾಕ್ಟರ್ ಫೌಂಡೇಶನ್'ಗೆ ದಾನ ಮಾಡುವ ಉದ್ದೇಶ ಹೊಂದಲಾಗಿದೆ.
ನಾದಗಂಗಾ ಲಹರಿ ಪ್ರಶಸ್ತಿ ಪ್ರದಾನ
ಸಂಜೆ 7.15 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗಾಂಧಿ ಆಸ್ಪತ್ರೆ ವತಿಯಿಂದ ಪರ್ಯಾಯ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಆಶೀರ್ವಾದ ದೊಂದಿಗೆ ಬಾಲ ಪ್ರತಿಭೆ ಗಂಗಾ ಶಶಿಧರನ್ ಅವರಿಂದ ವಯೋಲಿನ್ ಸಂಗೀತ ಕಛೇರಿ ನಡೆಯಲಿದೆ.
ಈ ಸಂದರ್ಭದಲ್ಲಿ ಅವರ ಸಾಧನೆಯನ್ನು ಗುರುತಿಸಿ ಗಾಂಧಿ ಆಸ್ಪತ್ರೆ ವತಿಯಿಂದ 'ನಾದಗಂಗಾ ಲಹರಿ' ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಸ್ಪತ್ರೆ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.