ಲೋಕಬಂಧು ನ್ಯೂಸ್ ಬೆಂಗಳೂರು, ಮೇ 5
ರಾಜ್ಯ ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರ ಪುಲಕೇಶಿನಗರದ ನಿವಾಸದಲ್ಲಿ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಸಚಿವರ ತಾಯಿಯ ಹತ್ತಿರದ ಸಂಬಂಧಿಯೇ ಈ ಕೃತ್ಯದ ಮಾಸ್ಟರ್ ಮೈಂಡ್ ಆಗಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳನ್ನು ಸೈಯದ್ ಅಮೀರ್ ಮತ್ತು ಅಮಿರ್ ಅಹ್ಮದ್ ಎಂದು ಗುರುತಿಸಲಾಗಿದೆ. ಆ ಪೈಕಿ ಸೈಯದ್ ಅಮೀರ್ ಸಚಿವರ ತಾಯಿಯ ರಕ್ತ ಸಂಬಂಧಿಯಾಗಿದ್ದು, ಪ್ರತಿದಿನ ಮನೆಗೆ ಬಂದು ಹೋಗುತ್ತಿದ್ದ!
ಟ್ರಾವೆಲ್ಸ್ ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸಿದ್ದ ಅಮೀರ್, ತನ್ನ ಸಾಲ ತೀರಿಸಲು ಮತ್ತು ಹಣದ ಹಪಹಪಿಯಿಂದ ತನ್ನದೇ ಸಂಬಂಧಿಯ ಮನೆಯಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದ.
ಆರೋಪಿ ಸೈಯದ್ ಅಮೀರ್, ಸಚಿವ ಜಮೀರ್ ಮನೆಯವರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದ. 2023ರಿಂದಲೇ ಆತ ಸಣ್ಣಪುಟ್ಟ ಚಿನ್ನಾಭರಣ ಕದಿಯಲು ಆರಂಭಿಸಿದ್ದ ಎನ್ನಲಾಗಿದೆ.
ಒಟ್ಟು ಸುಮಾರು 1.13 ಕೋ. ರೂ. ಮೌಲ್ಯದ 1.5 ಕೆಜಿ ಚಿನ್ನಾಭರಣಗಳನ್ನು ಖದೀಮರು ಎಗರಿಸಿದ್ದು, ಕದ್ದ ಚಿನ್ನವನ್ನು ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಅಡವಿಟ್ಟು, ಆ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ದುರಾಲೋಚನೆಗೆ ಇಂಥ ಕೃತ್ಯಕ್ಕೆ ಕೈಹಾಕಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ.
ಕಳ್ಳತನದ ವಿಚಾರ ಮನೆಯವರಿಗೆ ತಿಳಿಯುತ್ತಿದ್ದಂತೆಯೇ ಸೈಯದ್ ಅಮೀರ್ ಮನೆಗೆ ಬರುವುದನ್ನು ನಿಲ್ಲಿಸಿದ್ದ. ಅಷ್ಟೇ ಅಲ್ಲದೆ, ಫೋನ್ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಈ ಹಠಾತ್ ನಡವಳಿಕೆಯ ಬದಲಾವಣೆಯಿಂದ ಅನುಮಾನಗೊಂಡ ಸಚಿವರ ತಾಯಿ ಸೋಗ್ರಾ ಖಾನಂ ಪೊಲೀಸರಿಗೆ ದೂರು ನೀಡಿದ್ದರು.
ಕಾರ್ಯಾಚರಣೆ ನಡೆಸಿದ ಶಿವಾಜಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, ಖದೀಮರಿಂದ 759 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.