ಲೋಕಬಂಧು ನ್ಯೂಸ್ ಉಡುಪಿ, ಮೇ 5
ಕಳೆದ ಸುಮಾರು ಮೂರು ದಶಕಗಳಿಂದ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಗಾಂಧಿ ಆಸ್ಪತ್ರೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.ಆಸ್ಪತ್ರೆ 32ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಪಂಚಮಿ ಲಹರಿ ಟ್ರಸ್ಟ್ ಸಹಯೋಗದೊಂದಿಗೆ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಎಲ್ಲ ದಾನಗಳಿಗಿಂತ ಉತ್ತಮವಾದುದು. ಇಂದಿನ ದಿನಗಳಲ್ಲಿ ರಕ್ತದ ಆವಶ್ಯಕತೆ ಈ ಹಿಂದಿಗಿಂತ ಹೆಚ್ಚು ಅಗತ್ಯವಿದ್ದು, ಹೆಚ್ಚು ಹೆಚ್ಚು ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ನಡೆಯಬೇಕಾಗಿದೆ ಎಂದವರು ಆಶಿಸಿದರು.
ಇದೇ ಸಂದರ್ಭದಲ್ಲಿ ಆಯೋಜಿಸಲಾದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ ಅವರ 'ಬಹುಚಿತ್ರ ಜಗತ್' ಛಾಯಾಚಿತ್ರ ಪ್ರದರ್ಶನದಲ್ಲಿ ಮಾರಾಟವಾದ ಚಿತ್ರಗಳಿಂದ ಬಂದ ಹಣವನ್ನು 'ಹೋಮ್ ಡಾಕ್ಟರ್ ಫೌಂಡೇಶನ್' ಸಂಸ್ಥೆಗೆ ನೀಡುವ ಆಶಯ ಶ್ಲಾಘನೀಯ ಎಂದರು.
ಭಾರತೀಯ ವೈದ್ಯ ಮಂಡಳಿ ಉಡುಪಿ- ಕರಾವಳಿ ಘಟಕ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಮತ್ ಮತ್ತು ಜಿಲ್ಲಾ ರಕ್ತನಿಧಿ ಮುಖ್ಯಸ್ಥೆ ಡಾ. ವೀಣಾ ಕುಮಾರಿ ಅಭ್ಯಾಗತರಾಗಿದ್ದರು.
ಗಾಂಧಿ ಆಸ್ಪತ್ರೆಯ ಸ್ಥಾಪಕ ಎಂ. ಹರಿಶ್ಚಂದ್ರ,ಲಕ್ಷ್ಮಿ ಹರಿಶ್ಚಂದ್ರ ಮತ್ತು ಡಾ.ಪಂಚಮಿ ಹಾಗೂ ಡಾ.ವಿದ್ಯಾ ತಂತ್ರಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದ 35 ಮಂದಿಯನ್ನು ಗೌರವಿಸಲಾಯಿತು.
ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಮನ್ಯು ತಂತ್ರಿ ಪ್ರಾರ್ಥಿಸಿದರು. ಅವಿನಾಶ್ ಕಾಮತ್ ನಿರೂಪಿಸಿ, ವಂದಿಸಿದರು. ಯೂಸುಫ್ ಮಲ್ಪೆ ಸಹಕರಿಸಿದರು.
ಛಾಯಾಚಿತ್ರ ಪ್ರದರ್ಶನ
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಆಯೋಜಿಸಿದ 'ಬಹುಚಿತ್ರ ಜಗತ್' ಛಾಯಾಚಿತ್ರ ಪ್ರದರ್ಶನವನ್ನು ಛಾಯಾಚಿತ್ರ ಪತ್ರಕರ್ತ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಆಸ್ಟ್ರೋ ಮೋಹನ್ ಉದ್ಘಾಟಿಸಿದರು.