ಲೋಕಬಂಧು ನ್ಯೂಸ್ | ಉಡುಪಿ, ಮೇ 5
ಉಡುಪಿ ನಗರಸಭಾ ವ್ಯಾಪ್ತಿಯ ಇಂದ್ರಾಳಿ ವಾರ್ಡಿನ ಮಂಚಿಕುಮೇರಿ ಹಾಗೂ ಬನ್ನಂಜೆ ವಾರ್ಡಿನ ಮೀನು ಮಾರುಕಟ್ಟೆ ಬಳಿಯ 2 ನೂತನ ಅಂಗನವಾಡಿ ಕೇಂದ್ರಗಳ ಕಾಮಗಾರಿಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಂಗಳವಾರ ಶಿಲಾನ್ಯಾಸ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದ ಶೈಕ್ಷಣಿಕ ಸಾಧನೆಗೆ ಅಡಿಪಾಯವಾಗಿರುವ ಅಂಗನವಾಡಿ ಕೇಂದ್ರಗಳು ಪುಟಾಣಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರದ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡುತ್ತಿದೆ.
ಹಲವು ವರ್ಷಗಳ ಬೇಡಿಕೆಯಾಗಿದ್ದ ಆದಿವುಡುಪಿ ಹಾಗೂ ಮಂಚಿಕುಮೇರಿ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ತಲಾ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡು ಸ್ಥಳೀಯ ಪುಟಾಣಿಗಳ ಶಿಕ್ಷಣಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಮಾಜಿ ಸದಸ್ಯರಾದ ಅಶೋಕ್ ನಾಯ್ಕ್, ಕಲ್ಪನಾ ಸುಧಾಮ, ಹರೀಶ್ ರಾಮ್, ಸವಿತಾ ಹರೀಶ್ ರಾಮ್ ಮತ್ತು ರಮೇಶ್, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಮೊದಲಾದವರಿದ್ದರು.
