ಲೋಕಬಂಧು ನ್ಯೂಸ್ ಉಡುಪಿ, ಮೇ 28
ಉಡುಪಿ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬ (ಈದುಲ್ ಅಝಾ)ವನ್ನು ಸಂಭ್ರಮ, ಸಡಗರದಿಂದ ಗುರುವಾರ ಆಚರಿಸಿದರು.ಉಡುಪಿ ನಗರ, ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ ಮತ್ತು ಕಾರ್ಕಳ ತಾಲೂಕುಗಳ ಎಲ್ಲಾ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು.
ಮುಸ್ಲಿಂ ಬಾಂಧವರು ಬೆಳಗ್ಗೆ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಉಡುಪಿ ಜಾಮಿಯಾ ಮಸೀದಿಯಲ್ಲಿ ಮೌಲಾನಾ ಅಬ್ದುರ‌್ರಶೀದ್ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.
ಉಡುಪಿ ಜಿಲ್ಲಾ ಸಂಯುಕ್ತ ಜಮಾತೆಯ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಪೂರ್ ಈದ್ ನಮಾಝ್'ನಲ್ಲಿ ಪಾಲ್ಗೊಂಡರು.
ಕುಂದಾಪುರ ಜುಮಾ ಮಸೀದಿಯಿಂದ ಬೆಳಗ್ಗೆ ಈದ್ ಮೆರವಣಿಗೆ ಹೊರಟು ಈದ್ಗಾ ಮೈದಾನದಲ್ಲಿ ಈದ್ ವಿಶೇಷ ನಮಾಝ್ ನೆರವೇರಿಸಲಾಯಿತು.
ಬ್ರಹ್ಮಗಿರಿ ನಾಯರ್‌ಕೆರೆಯ ಹಾಶಿಮಿ ಮಸೀದಿಯ ಇಮಾಮ್ ಒಬೇದುರ‌್ರಹ್ಮಾನ್ ನದ್ವಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ನಿರ್ವಹಿಸಲಾಯಿತು.
ಧರ್ಮಗುರುಗಳು ತಮ್ಮ ಈದ್ ಸಂದೇಶದಲ್ಲಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಬಗ್ಗೆ ಒತ್ತಿಹೇಳಿದರು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಹಬ್ಬವನ್ನು ಸಂಭ್ರಮದಿಂದ ಆಚರಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಧರ್ಮಗುರುಗಳು ತಮ್ಮ ಈದ್ ಸಂದೇಶದಲ್ಲಿ ಯುವಜನತೆ ಮಾದಕ ವ್ಯಸನಗಳಿಗೆ ಬಲಿಯಾಗ ದಂತೆ ಜಾಗೃತಿ ಮೂಡಿಸಿದರು. ಅಲ್ಲದೆ, ಎಲ್ಲರೂ ಪರಸ್ಪರ ಸಹೋದರಂತೆ ಬದುಕಿ ಶಾಂತಿಯ ವಾತಾವರಣ ನಿರ್ಮಿಸುವಂತೆ ಸೌಹಾರ್ದ ಸಂದೇಶ ನೀಡಿದರು.
ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ಬಹುತೇಕ ಮಸೀದಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.