ಲೋಕಬಂಧು ನ್ಯೂಸ್ | ಬೈಂದೂರು, ಮೇ 25
ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳಾ ಯಾತ್ರಾರ್ಥಿಯ ಮೈಮೇಲಿದ್ದ ಚಿನ್ನಾಭರಣ ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ಮೇ 17ರಂದು ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮಹಿಳಾ ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಆ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ಬಳಿಕ ಮೃತಪಟ್ಟ ಮಹಿಳೆಯೊಬ್ಬರ ಮೈಮೇಲಿದ್ದ ಚಿನ್ನಾಭರಣಗಳು ಕಾಣೆಯಾಗಿರುವ ಬಗ್ಗೆ ಶ್ರೀಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗಿತ್ತು.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಮಾರ್ಗದರ್ಶನದಲ್ಲಿ ಕೊಲ್ಲೂರು ಠಾಣೆ ಉಪನಿರೀಕ್ಷಕ ವಿನಯ ಎಂ. ಕೊರ್ಲಹಳ್ಳಿ ಹಾಗೂ ಸಿಬ್ಬಂದಿಗಳ ತಂಡ ತನಿಖೆ ಕೈಗೆತ್ತಿಕೊಂಡಿತ್ತು.
ಸಿಸಿಟಿವಿ ದೃಶ್ಯಾವಳಿ, ಸಾರ್ವಜನಿಕರು ತೆಗೆದ ಛಾಯಾಚಿತ್ರಗಳು ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ನಿವಾಸಿ ಹೇಮಂತ್ (40) ಎಂಬಾತನನ್ನು ಪ್ರಕರಣ ದಾಖಲಾದ 24 ಗಂಟೆಯೊಳಗೆ ಪತ್ತೆಹಚ್ಚಿ ಬಂಧಿಸಲಾಗಿದೆ.
ನಗರದ ಧಬಂಧಿತನಿಂದ 3.910 ಗ್ರಾಂ ತೂಕದ ಚಿನ್ನದ ಉಂಗುರ (ಅಂದಾಜು ಮೌಲ್ಯ 57 ಸಾವಿರ), 3.450 ಗ್ರಾಂ ತೂಕದ ಚಿನ್ನದ ಬಳೆ (ಅಂದಾಜು ಮೌಲ್ಯ 50 ಸಾವಿರ) ಹಾಗೂ 7.160 ಗ್ರಾಂ ತೂಕದ ಚಿನ್ನದ ಸರ (ಅಂದಾಜು ಮೌಲ್ಯ 1 ಲಕ್ಷ) ಸೇರಿದಂತೆ ಒಟ್ಟು 2.07 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

