ಲೋಕಬಂಧು ನ್ಯೂಸ್ | ಉಡುಪಿ, ಮೇ 15
ಶಾಲಾ ಕಾಲೇಜುಗಳಲ್ಲಿ ಸೀಮಿತ ಮತೀಯ ತೊಡುಗೆಗಳಿಗೆ ಅವಕಾಶ ನೀಡುವ ರಾಜ್ಯ ಸರಕಾರದ ನಿರ್ಧಾರಕ್ಕೆ ಉಡುಪಿ ಸಹಬಾಳ್ವೆ ವೇದಿಕೆ ಬೆಂಬಲ ಸೂಚಿಸುತ್ತದೆ. ತಡವಾಗಿಯಾದರೂ ಸರಕಾರ ಸಮತೋಲದ ನಿರ್ಧಾರ ತೆಗೆದುಕೊಂಡಿದೆ ಎಂದು ಪ್ರಧಾನ ಸಂಚಾಲಕ ಕೆ.ಫಣಿರಾಜ್ ತಿಳಿಸಿದ್ದಾರೆ.
2022ರಲ್ಲಿ ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಅನವಶ್ಯಕವಾಗಿ 'ಹಿಜಾಬ್ ವಿವಾದ' ಹುಟ್ಟುಹಾಕಲಾಯಿತು. ಅಲ್ಪಸಂಖ್ಯಾತ ವಿದ್ಯಾರ್ಥಿನಿಯರನ್ನು ಗುರಿಯಾಗಿಟ್ಟುಕೊಂಡು ಅಲ್ಪಸಂಖ್ಯಾತರ ಸಹಜ ಬದುಕಿನ ಕ್ರಮವನ್ನು ಅಪರಾಧೀಕರಣಗೊಳಿಸುವ ರಾಜಕೀಯ ಯೋಜನೆಯ ಭಾಗವಾಗಿತ್ತು. ಯೋಜಿತವಾಗಿ ಕೋಮುವಾದಿ ಸಂಘಟನೆಗಳು ಅದನ್ನು ರಾಜ್ಯವ್ಯಾಪಿ ದಾಂಧಲೆಯಾಗಿ ಬೆಳೆಸಿದವು. ಅದಕ್ಕೆ ಅನುಗುಣವಾಗಿ ಅಂದಿನ ಬಿಜೆಪಿ ಸರ್ಕಾರ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಕ್ರಮದ ಮೇಲೆ ನಿಷೇಧ ಹೇರಿತ್ತು.
ನಂತರದ ನಾಲ್ಕು ವರ್ಷಗಳಲ್ಲಿ ಪರೀಕ್ಷೆ ವೇಳೆ ಕರ್ನಾಟಕದ ಕೆಲವು ವಿದ್ಯಾಲಯಗಳಲ್ಲಿ ಜನಿವಾರದ ನಿರ್ಬಂಧ ಹೇರಿದಾಗ ಕೋಮುವಾದಿ ಸಂಘಟನೆಗಳು 'ಧಾರ್ಮಿಕ ದಾಳಿ'ಯ ಆರೋಪ ಮಾಡಿ ಗಲಾಟೆ ಎಬ್ಬಿಸಿದ್ದವು. 2026ರ ಪರೀಕ್ಷೆಯ ವೇಳೆ ಮತ್ತೆ ಅದೇ ವಿಧದ ವಿವಾದ ನಡೆದ ನಂತರ ಪ್ರಸ್ತುತ ಸರಕಾರ 2022ರ ಆಜ್ಞೆಯನ್ನು ಹಿಂಪಡೆದಿದೆ ಎಂದು ಫಣಿರಾಜ್ ವಿವರಿಸಿದ್ದಾರೆ.
