ಡೀಮ್ಡ್ ಫಾರೆಸ್ಟ್ ಸಮಸ್ಯೆ ಸರಿಪಡಿಸಲು ಯತ್ನ

ಲೋಕಬಂಧು ನ್ಯೂಸ್ | ಕಾರ್ಕಳ, ಮೇ 25
ರಾಜ್ಯದಲ್ಲಿನ ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ಸಮಸ್ಯೆ ಸರಿಪಡಿಸಲು ಯತ್ನಿಸಲಾಗುತ್ತಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ಗೆ ಮರುಮನವಿ ಸಲ್ಲಿಸಲುದ್ದೇಶಿಸಿದ್ದು ಅದಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಸೋಮವಾರ ಕಾರ್ಕಳ ವಲಯ ಅರಣ್ಯಾಧಿಕಾರಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೂತನ ಕಟ್ಟಡ ಉದ್ಘಾಟಿಸಿ, ಅರಣ್ಯ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಸರ್ಕಾರಿ ಕಟ್ಟಡ, ಆಸ್ಪತ್ರೆ, ಅಂಗನವಾಡಿ ಇತ್ಯಾದಿಗಳಿದ್ದು, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಆಗಿರುವ ತಪ್ಪು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಆ ಸಮಸ್ಯೆ ಪರಿಹರಿಸಲು ಇದೀಗ ಕೊನೆಯ ಅವಕಾಶ ಲಭಿಸಿದೆ. ಉಚ್ಚ ನ್ಯಾಯಾಲಯಕ್ಕೆ ಮರುಮನವಿ ಸಲ್ಲಿಸಲಾಗುವುದು.


ಮೊದಲಿಗೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದಾಗ 9 ಲಕ್ಷ ಹೆಕ್ಟೇರ್ ಜಮೀನನ್ನು ಡೀಮ್ಡ್ ಅರಣ್ಯ ಎಂದು ಗುರುತಿಸಲಾಗಿತ್ತು, ನಂತರ 2022ರಲ್ಲಿ ಪ್ರಮಾಣಪತ್ರ ಸಲ್ಲಿಸಿದಾಗ 3.33 ಲಕ್ಷ ಹೆಕ್ಟೇರ್ ಜಮೀನು ಎಂದು ಪರಿಷ್ಕರಿಸಲಾಯಿತು. ಆಗ ಸಮರ್ಪಕವಾಗಿ ಸರ್ವೇ ನಡೆಸದೆ, ಖುದ್ದು ಪರಿಶೀಲಿಸದ ಕಾರಣ ಸರ್ಕಾರಿ ಕಟ್ಟಡ, ಶಾಲೆ, ಆಸ್ಪತ್ರೆ, ಪಟ್ಟಾಭೂಮಿ ಸೇರಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟ ಎದುರಿಸುತ್ತಿದ್ದು ಈ ಲೋಪ ಸರಿಪಡಿಸಬೇಕಾಗಿದೆ ಎಂದರು.


ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ ದಂಡ ಮತ್ತು ಇತರ ಶುಲ್ಕ ಪಾವತಿಸಬೇಕಾಗಿದೆ. ಪ್ರಸ್ತುತ ಹೈಕೋರ್ಟ್ ಈ ಸಂಬಂಧ ನಿರ್ದೇಶನ ನೀಡಿದ್ದು, ನ್ಯಾಯಾಲಯದ ಆದೇಶದಂತೆ ಸರ್ಕಾರ ನಡೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.


ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್, ಕಮಲಾ ಕರಿಕಳನ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.


ಅದಕ್ಕೂ ಮುನ್ನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ತೆರಳಿದ ಸಚಿವ ಈಶ್ವರ ಖಂಡ್ರೆ, ದೇವರ ದರ್ಶನ ಪಡೆದು ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.