ಲೋಕಬಂಧು ನ್ಯೂಸ್ | ಹೊನ್ನಾವರ, ಮೇ 13
ಲಯಬ್ರಹ್ಮರೆಂದೇ ಖ್ಯಾತರಾಗಿದ್ದ ಬಡಗುತಿಟ್ಟಿನ ಅಗ್ರಮಾನ್ಯ ಸಾಂಪ್ರದಾಯಿಕ ಭಾಗವತ ಕಪ್ಪೆಕೆರೆ ಸುಬ್ರಾಯ ಈಶ್ವರ ಹೆಗಡೆ (79) ಬುಧವಾರ ನಿಧನರಾದರು. ಕೆಲವು ತಿಂಗಳಿನಿ೦ದ ಅಸೌಖ್ಯದಲ್ಲಿದ್ದ ಅವರು ಪತ್ನಿ, ಇಬ್ಬರು ಪುತ್ರರು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ನೆಬ್ಬೂರು ನಾರಾಯಣ ಹೆಗಡೆ, ಕರ್ಕಿ ಸತ್ಯನಾರಾಯಣ ಹಾಸ್ಯಗಾರ, ಪ್ರಭಾಕರ ಭಂಡಾರಿಯವರಂತಹ ಶ್ರೇಷ್ಠ ಕಲಾವಿದರ ರಂಗದ ಒಡನಾಡಿಯಾಗಿದ್ದರು. ಮರವಂತೆ ನರಸಿಂಹ ದಾಸ, ಎಂ. ನಾರ್ಣಪ್ಪ ಉಪ್ಪೂರರಿಂದಲೂ ಪ್ರೇರಣೆ ಪಡೆದಿದ್ದರು.
ಗುಂಡಬಾಳ, ಇಡಗುಂಜಿ, ಅಮೃತೇಶ್ವರಿ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು, ಪಂಚಲಿಂಗ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ ಗೈದಿದ್ದರು. ಹೊನ್ನಾವರದ ಹೊಸಾಕುಳಿಯಲ್ಲಿ ತಾಳಮದ್ದಲೆಗಾಗಿಯೇ ಸ್ಥಾಪನೆಗೊಂಡ ಕಲಾವರ್ಧಕ ಸಂಘದಲ್ಲಿ ನಾಲ್ಕು ದಶಕಗಳಿಂದ ಭಾಗವತರಾಗಿದ್ದರು.
ಅದ್ಭುತ ತಾಳ, ಲಯ, ಸಿದ್ಧಿ ಪಡೆದಿದ್ದ ಇವರು, ಯಕ್ಷಗಾನದ ಮುಮ್ಮೇಳದ ಕಲಾವಿದರಿಗೆ ಅತ್ಯಂತ ಪ್ರಿಯ ಭಾಗವತರಾಗಿದ್ದರು. ಅಪಾರ ಪೌರಾಣಿಕ ಜ್ಞಾನ, ಪ್ರಸಂಗ ನಡೆಯ ಪರಿಣತಿ ಅವರದ್ದಾಗಿತ್ತು. ಯಕ್ಷಗಾನ ಗುರುಗಳಾಗಿಯೂ ಹಲವು ಕಡೆ ತರಗತಿಗಳನ್ನು ನಡೆಸಿ ಶಿಷ್ಯರನ್ನು ಸಿದ್ಧಗೊಳಿಸಿದ್ದರು.
ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಇತ್ತೀಚೆಗೆ ಯಕ್ಷಮಂಗಲ ಪ್ರಶಸ್ತಿ ನೀಡಿ ಗೌರವಿಸಿತ್ತು. ಉಡುಪಿ ಯಕ್ಷಗಾನ ಕಲಾರಂಗ ನಾರ್ಣಪ್ಪ ಉಪ್ಪೂರರ ನೆನಪಿನ ಪ್ರಶಸ್ತಿಯೊಂದಿಗೆ ಸಮ್ಮಾನಿಸಿತ್ತು. ಕಳೆದ ವರ್ಷ ಯಕ್ಷಗಾನ ಕಲಾರಂಗದ ಸುವರ್ಣ ಪುರಸ್ಕಾರಕ್ಕೆ ಪಾತ್ರರಾಗಿದ್ದರು.
ಕಪ್ಪೆಕೆರೆ ಅವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.
