ಲೋಕಬಂಧು ನ್ಯೂಸ್ | ಉಡುಪಿ, ಮೇ 15
ಮಕ್ಕಳಿಗೆ ಎಲ್ಲ ರೀತಿಯ ಜ್ಞಾನವನ್ನು ತಾಯಿಯೇ ನೀಡಬೇಕು. ಆಗ ಮಾತ್ರ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯಲು ಸಾಧ್ಯ. ತಾಯಿ ಮಕ್ಕಳಿಗೆ ಶಿಸ್ತು, ಸಂಯಮ, ಹಿರಿಯರಿಗೆ ಗೌರವ, ತಾಳ್ಮೆಯ ಗುಣಗಳನ್ನು ಕಲಿಸಿ ಬೆಳೆಸಬೇಕು. ಮೊದಲು ನಾವು ನಮ್ಮ ಸಂಸ್ಕೃತಿಯನ್ನು ಕಲಿತರೆ ನಮ್ಮ ಮಕ್ಕಳು ಕಲಿಯುತ್ತಾರೆ ಎಂದು ಬೆಂಗಳೂರು ಆನಂದ ಸಿದ್ಧಿ ಪೀಠ ಮತ್ತು ಶ್ರೀ ಲಕ್ಷ್ಮೀ ಭೂವರಾಹ ಸಾಲಿಗ್ರಾಮ ಕ್ಷೇತ್ರದ ಸಂಸ್ಥಾಪಕ ಡಾ.ಮಹರ್ಷಿ ಆನಂದ ಗುರೂಜಿ ಹೇಳಿದರು.
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್‌ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಹಾರುದ್ರ ಯಾಗದ ಧಾರ್ಮಿಕ ಸಭೆಯಲ್ಲಿ ಶುಕ್ರವಾರ ಆಶೀರ್ಚನ ನೀಡಿದರು.
ಎಚ್ಚರಿಕೆಯಿಂದ ವಾಹನ ಚಲಾಯಿಸಿ
ಸಾರಿಗೆ ಹಾಗೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ, ಈ ಭಾಗದಲ್ಲಿ ಸುಮಾರು 75 ವರ್ಷಗಳ ಹಿಂದೆ ಮಹಾರುದ್ರಯಾಗ ನಡೆದಿದೆ ಎನ್ನಲಾಗಿದೆ. ಇದೀಗ ಪ್ರಸಾದ್‌ರಾಜ್ ಕಾಂಚನ್ ಅವರಿಗೆ ಈ ಯೋಗ ದೊರೆತಿದೆ. ಲೋಕ ಕಲ್ಯಾಣಾರ್ಥವಾಗಿ ನಡೆಸಲಾದ ಈ ಯಾಗದಿಂದ ದೇಶ ಮತ್ತು ರಾಜ್ಯಕ್ಕೆ ಬಂದ, ಬರುವ ಯಾವುದೇ ಸಂಕಷ್ಟಗಳು ದೂರವಾಗಿ ನಾಡು ಸುಭಿಕ್ಷೆ ಹೊಂದಲಿ ಎಂದು ಆಶಿಸಿದರು.
ಇತ್ತೀಚಿನ ವರ್ಷಗಳಲ್ಲಿ ದ್ವಿಚಕ್ರಗಳಿಂದ ಆಗುತ್ತಿರುವ ಅಪಘಾತಗಳು ಜಾಸ್ತಿ. ಮುಖ್ಯವಾಗಿ ದ್ವಿಚಕ್ರ ಸವಾರರ ಆಜಾಗರೂಕತೆಯೇ ಅದಕ್ಕೆಲ್ಲ ಕಾರಣ. ಹಾಗಾಗಿ ಯುವ ಜನರು ಎಚ್ವರಿಕೆಯಿಂದ ವಾಹನವನ್ನು ಚಲಾಯಿಸಬೇಕು ಎಂದರು.
ಮಹಾರುದ್ರ ಯಾಗ ದೇವರ ಪ್ರೇರಣೆ
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಅವರು, ನಾನು ತೀರ್ಥಯಾತ್ರೆಗೆ ತೆರಳಿದಾಗ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನಗೆ ದೇವರಿಂದಲೇ ಯಾಗ ನೆರವೇರಿಸಲು ಪ್ರೇರಣೆಯಾಯಿತು. ಸಾಮಾನ್ಯ ಜನರಿಗೆ ಇಂಥ ಯಾಗ ನೆರವೇರಿಸಲು ಕಷ್ಟಸಾಧ್ಯ ಜನಸಾಮಾನ್ಯರೂ ಯಾಗದಲ್ಲಿ ಭಾಗವಹಿಸಿ ಕಣ್ತುಂಬಿಕೊಳ್ಳುವಂತೆ ಮಾಡಬೇಕೆನ್ನುವ ಮಹದಾಸೆ ನನ್ನದಾಗಿತ್ತು. ಇದೀಗ ಎಲ್ಲ ಕೆಲಸಗಳು ದೇವರ ದಯೆಯಿಂದ ಪವಾಡ ಸದೃಶವಾಗಿ ಆಗುತ್ತಿದೆ ಎಂದರು.
ಮಕ್ಕಳಿಗೆ ಹೆಲ್ಮೆಟ್ ವಿತರಣೆ
18 ವರ್ಷ ಕೆಳಗಿನ ಮಕ್ಕಳು ದ್ವಿಚಕ್ರದಲ್ಲಿ ಚಲಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಹಾಕಬೇಕೆಂದು ಕೇಂದ್ರ ಸರಕಾರದ ನಿರ್ದೇಶನದಂತೆ ಎಥರ್ ಕಂಪೆನಿ ಹೆಲ್ಮೆಟ್'ನ್ನು ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಆರ್‌ಟಿಓ ಅಧಿಕಾರಿ ಸಂತೋಷ್ ಶೆಟ್ಟಿ ಜೊತೆಯಾಗಿ ಸಾಂಕೇತಿಕವಾಗಿ ಮಕ್ಕಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಚಿವ ರಾಮಲಿಂಗ ರೆಡ್ಡಿ ಮತ್ತು ಮಹರ್ಷಿ ಆನಂದ ಗುರೂಜಿ ಅವರನ್ನು ಸಮ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಆಭಯಚಂದ್ರ ಜೈನ್, ಪಟ್ಲ ಫೌಡೇಶನ್ ಪ್ರವರ್ತಕ ಪಟ್ಲ ಸತೀಶ್ ಶೆಟ್ಟಿ, ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ ಸುವರ್ಣ, ಪ್ರಮುಖರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು ಮುನಿಯಾಲು ಉದಯ ಕುಮಾರ್ ಶೆಟ್ಟಿ, ಇಂದ್ರಾಳಿ ಜಯಕರ್ ಶೆಟ್ಟಿ, ಜಯ ಸಿ. ಕೋಟ್ಯಾನ್, ಅಶೋಕ್ ಶೆಟ್ಟಿ ಮೈರ್ಮಾಡಿ, ಶಂಕರ ಶೆಟ್ಟಿ, ಸುರೇಂದ್ರ ಶೆಟ್ಟಿ, ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಮಂಜುಳ ಕೆ., ನಾರಾಯಣ ಬಲ್ಲಾಳ್, ಪದ್ಮನಾಭ ಬಂಗೇರ, ಚಂದ್ರಶೇಖರ ಟಿ., ಶಶಿಧರ್ ಎಂ. ಅಮೀನ್, ರಮೇಶ್ ಮಾಸ್ತರ್ ಕಲ್ಮಾಡಿ, ಸುರೇಂದ್ರ ಉಪಾಧ್ಯ, ಗುರುರಾಜ್ ರಾವ್, ಯಾದವ ಅಮೀನ್, ನರೇಂದ್ರ ಎಂ., ಸತೀಶ್ ಬಂಗೇರ, ನವೀನ್ ಕುಂದರ್, ಸುರೇಶ್ ಅಮೀನ್, ತಾರಾನಾಥ ಪೂಜಾರಿ ಮೊದಲಾದವರಿದ್ದರು.
ರುದ್ರಯಾಗ ಸಮಿತಿಯ ಸಂಚಾಲಕ ಕೆ. ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿ, ರಮೇಶ್ ತಿಂಗಳಾಯ ವಂದಿಸಿದರು. ದಯಾನಂದ ಮತ್ತು ಡಾ. ವಿಜಯೇಂದ್ರ ವಸಂತ್ ನಿರೂಪಿಸಿದರು.
