ಲೋಕಬಂಧು ನ್ಯೂಸ್ | ಉಡುಪಿ, ಮೇ 2
ವಾಣಿಜ್ಯ ಬಳಕೆಯ ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 993 ರೂ.ಗೆ ಏರಿಕೆ ಮಾಡಿರುವುದು ಹೊಟೇಲ್ ಉದ್ದಿಮೆಗೆ ದೊಡ್ಡ ಆಘಾತ ತಂದಿದೆ ಎಂದು ಹೊಟೇಲ್ ಮಾಲಕರ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಎಲ್.ಪಿ.ಜಿ ದರ ಏರಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ಬೆಲೆ ಏರಿಕೆಯಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಲವರು ಬೆಳಿಗ್ಗೆ ಹೋಟೆಲ್ ತೆರೆದು ಮಧ್ಯಾಹ್ನದ ಬಳಿಕ ಬಂದ್ ಮಾಡುವ ಸ್ಥಿತಿಗೆ ತಲುಪಿದ್ದಾರೆ. ಇನ್ನೂ ಕೆಲವು ಮಂದಿ ಕೆಲವೊಂದು ಐಟಂಗಳನ್ನು ಮಾಡಿಕೊಂಡು ದಿನ ಕಳೆಯುತ್ತಿದ್ದಾರೆ.
ಇರಾನ್- ಅಮೆರಿಕಾ ಯುದ್ಧ ಅಂತ್ಯಗೊಂಡರೂ ಗ್ಯಾಸ್ ಸಮಸ್ಯೆ ಮಾತ್ರ ಪರಿಹಾರಗೊಂಡಿಲ್ಲ. ಇದು ಯಾಕೆ ಹೀಗೆ ಎಂಬುವುದೇ ತಿಳಿಯುತ್ತಿಲ್ಲ ಎಂದು ವಿಷಾದಿಸಿದರು.
ಮೇ 1ರಂದು ಬೆಳಿಗ್ಗೆ ಒಮ್ಮೆಲೇ ಎಲ್‌ಪಿ.ಜಿ ದರ 993 ರೂ. ಹೆಚ್ಚಳ ಮಾಡಿದ್ದಾರೆ. ಇದು ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಆಘಾತ ಉಂಟು ಮಾಡಿದೆ. ಈ ರೀತಿ ಗ್ಯಾಸ್ ದರ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕಿದಂತಾಗುತ್ತದೆ.
ಗ್ಯಾಸ್ ಲಭ್ಯತೆಯೂ ಸಮರ್ಪಕವಾಗಿಲ್ಲ. ಒಂದು ದಿನ ಕೊಟ್ಟರೆ ಮತ್ತೆರಡು ದಿನ ಗ್ಯಾಸ್ ಇರುವುದಿಲ್ಲ. ಗ್ಯಾಸ್ ಕೊರತೆ ಹಾಗೂ ದರ ಏರಿಕೆಯಿಂದ ಆಹಾರ ಪದಾರ್ಥಗಳ ದರವನ್ನು ಹೆಚ್ಚಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಡಾ.ತಲ್ಲೂರು ಅಳಲು ತೋಡಿಕೊಂಡರು.