ಲೋಕಬಂಧು ನ್ಯೂಸ್ | ಕುಂದಾಪುರ, ಮೇ 22
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಉತ್ತಮವಾಗಿದ್ದು, ಬಡಜನತೆಯ ಆರ್ಥಿಕ ಬೆಳವಣಿಗೆಯ ಭಾಗವಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ, ಸ್ಥಳೀಯ ಭಾಷೆ- ಸಂಸ್ಕೃತಿ ಅರಿಯದ ಸಿಬಂದಿ ಇತ್ಯಾದಿ ಕಾರಣಗಳಿಂದಾಗಿ ಸಹಕಾರ ಸಂಸ್ಥೆಗಳು ಜನತೆಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಸಹಕಾರಿ ರಂಗದ ಪ್ರತಿಷ್ಠಿತ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಂಪೂರ್ಣ ಹವಾನಿಯಂತ್ರಿತ 12ನೇ ಶಾಖೆಯನ್ನು ಕುಂದಾಪುರ ಮುಖ್ಯ ರಸ್ತೆಯಲ್ಲಿನ ಹೋಟೆಲ್ ಪಾರಿಜಾತ ಬಳಿಯ ಶ್ರೀ ನಂದಿಕೇಶ್ವರ ಟವರ್ಸ್'ನಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿಯ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿರುವ ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಕಳೆದ ಸುಮಾರು 3 ದಶಕಗಳಿಂದ ಸಾಧಿಸಿದ ಪ್ರಗತಿಯಲ್ಲಿ ಜಯಕರ ಶೆಟ್ಟಿ ಇಂದ್ರಾಳಿ ಶ್ರಮ ಬಹಳಷ್ಟಿದೆ. ಜೊತೆಗೆ ಸೊಸೈಟಿ ನಿರ್ದೇಶಕರು, ಸಿಬಂದಿಗಳ ಸಮನ್ವಯತೆಯಿಂದ ಸಂಸ್ಥೆ ಪ್ರಗತಿ ಸಾಧಿಸಿದೆ. ತನ್ನ ಲಾಭ ಗಳಿಕೆಯ ಒಂದಷ್ಟು ಪಾಲನ್ನು ಸಮಾಜದ ವಿವಿಧ ಚಟುವಟಿಕೆಗಳಿಗೆ ನೀಡುವ ಮೂಲಕ ಸಮಾಜಮುಖಿಯಾಗಿದೆ ಎಂದರು.
ದ.ಕ.ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯಲ್ಲಿ ಪ್ರಗತಿ ಸಾಧಿಸಿರುವ ಕೆಲವೇ ಸಹಕಾರ ಸಂಸ್ಥೆಗಳಲ್ಲಿ ಬಡಗಬೆಟ್ಟು ಸೊಸೈಟಿ ಮುಂಚೂಣಿಯಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ವ್ಯವಸ್ಥೆಯನ್ನು ಬಲಪಡಿಸುವ ಕಾಯ್ದೆಗಳನ್ನು ರೂಪಿಸುತ್ತಿದ್ದು, ಅದು ಸಹಕಾರಿಗಳಿಗೆ ಸ್ಪೂರ್ತಿಯಾಗಲಿದೆ ಎಂದರು.
ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಕುಂದಾಪುರ ಮತ್ತು ಯಶಪಾಲ್ ಸುವರ್ಣ ಉಡುಪಿ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ ಮೊಳಹಳ್ಳಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್. ಹಾಗೂ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ನೂತನ ವಿಶಾಲವಾದ ಸುಸಜ್ಜಿತ ಕುಂದಾಪುರ ಶಾಖೆಯಲ್ಲಿ ಆಕರ್ಷಕ ಠೇವಣಿ ಯೋಜನೆಗಳು, ಕಡಿಮೆ ಬಡ್ಡಿದರದಲ್ಲಿ ವಿವಿಧ ಸಾಲ ಸೌಲಭ್ಯಗಳು, ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್, ಆರೋಗ್ಯ ಕಾರ್ಡ್, ಎಲ್ಲಾ ವಿಧದ ವಿಮಾ ಸೇವೆಗಳು, ಮೊಬೈಲ್ ಮೂಲಕವೇ ದೈನಿಕ ಠೇವಣಿ ಸಂಗ್ರಹಣೆ, `0' ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್ಡ್ ಕಾಲ್ ಸೇವೆ ಇತ್ಯಾದಿ ಸೇವೆ ಲಭಿಸಲಿದ್ದು ಶಾಖೆಯ ಉದ್ಘಾಟನೆ ಪ್ರಯುಕ್ತ ಪ್ರತ್ಯೇಕ ಕುಂದಾಪುರ ಶಾಖೆಯ ಗ್ರಾಹಕರಿಗಾಗಿ ವಿಶೇಷ ಠೇವಣಿ ಬಡ್ಡಿದರವನ್ನು ಸಂಸ್ಥೆ ಘೋಷಿಸಿದೆ ಎಂದರು.
ಸಹಕಾರ ಕ್ಷೇತ್ರದಲ್ಲಿ 107 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಂಘ ಪ್ರಸ್ತುತ 23 ಸಾವಿರ ಸದಸ್ಯರನ್ನು ಹೊಂದಿದ್ದು, 662 ಕೋಟಿ ಠೇವಣಿ ಹಾಗೂ ರೂ. 528 ಕೋಟಿ ಸದಸ್ಯರ ಹೊರಬಾಕಿ ಸಾಲ ಹೊಂದಿದೆ. 113.24 ಕೋಟಿ ನಿಧಿ ಹಾಗೂ ರೂ. 284.07 ಕೋಟಿ ಹೂಡಿಕೆ ಹೊಂದಿದ್ದು, ಒಟ್ಟು ರೂ. 795 ಕೋಟಿ ದುಡಿಯುವ ಬಂಡವಾಳ ಹೊಂದಿದೆ. 2025-26ನೇ ಸಾಲಿನಲ್ಲಿ 4,062.29 ಕೋಟಿ ವಾರ್ಷಿಕ ವಹಿವಾಟು ನಡೆಸಿ 18.13 ಕೋ. ರೂ. ಲಾಭ ಗಳಿಸಿದೆ ಎಂದರು.
ಸೊಸೈಟಿ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಹಾಗೂ ನಿರ್ದೇಶಕರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ನೂತನ ಗ್ರಾಹಕರಿಗೆ ಪಾಸ್ ಪುಸ್ತಕ ಹಾಗೂ ಠೇವಣಿಪತ್ರ ಹಸ್ತಾಂತರಿಸಲಾಯಿತು.
ಒಳಾಂಗಣ ವಿನ್ಯಾಸ ಮಾಡಿದ ಮುರಳೀಧರ ಶೆಟ್ಟಿ ಕಡೆಕಾರ್ ಅವರನ್ನು ಗೌರವಿಸಲಾಯಿತು.
ಸಹಕಾರ ಯೂನಿಯನ್ ನಿರ್ದೇಶಕ ಶ್ರೀಧರ್ ಪಿ.ಎಸ್. ನಿರೂಪಿಸಿದರು. ಕುಂದಾಪುರ ಶಾಖೆ ವ್ಯವಸ್ಥಾಪಕ ಸಮರ್ಥ ಶೆಟ್ಟಿ ವಂದಿಸಿದರು.
.jpg)
.jpg)
.jpg)