ಲೋಕಬಂಧು ನ್ಯೂಸ್ | ಫೀನಿಕ್ಸ್, ಮೇ 19
ವಿದ್ಯಾವಾಚಸ್ಪತಿ ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ ಅವರು ವಿಶ್ವಕ್ಕೆ ನೀಡಿದ ಅಪಾರ ಅಧ್ಯಾತ್ಮ ಮಾರ್ಗದರ್ಶನವನ್ನು ಗಮನಿಸಿ ಮೇ 17ನ್ನು ಬನ್ನಂಜೆ ಸಂಸ್ಮರಣಾ ದಿನವನ್ನಾಗಿ ಆಚರಿಸಲಾಗುವುದು ಎಂದು ಫೀನಿಕ್ಸ್ ನಗರದ ಮೇಯರ್ ಕೋರಿ ವುಡ್ಸ್ ಘೋಷಿಸಿದರು.
ಅಧಿಕೃತ ಘೋಷಣಾ ಪತ್ರವನ್ನು ಬೆಂಗಳೂರಿನ ಬನ್ನಂಜೆ ಪ್ರತಿಷ್ಠಾನದ ಡಾ.ವೀಣಾ ಬನ್ನಂಜೆ ಮತ್ತು ಡಾ.ಗುರುರಾಜ್ ಕರ್ಜಗಿ ಅವರಿಗೆ ಫೀನಿಕ್ಸ್ ನಗರದ ಪುತ್ತಿಗೆ ಮಠದ ಶಾಖಾ ಮಠದಲ್ಲಿ ನಡೆದ ಸಭೆಯಲ್ಲಿ ಹಸ್ತಾಂತರಿಸಿದರು.
ಅಮೆರಿಕಾದಲ್ಲಿ ಪುತ್ತಿಗೆ ಮಠದ ಮೊದಲ ಶಾಖೆಯಾದ ಫೀನಿಕ್ಸ್ ಮಹಾನಗರದ ಶ್ರೀ ವೆಂಕಟಕೃಷ್ಣ ವೃಂದಾವನ ಕ್ಷೇತ್ರದಲ್ಲಿ ನಡೆದ `ಶ್ರೀ ಬನ್ನಂಜೆ 90 ವಿಶ್ವನಮನ' ಕಾರ್ಯಕ್ರಮದಲ್ಲಿ ಮೇಯರ್ ಈ ಘೋಷಣೆ ಮಾಡಿದ್ದು ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮತ್ತು ಪ್ರಧಾನ ಅರ್ಚಕ ಕಿರಣ್ ರಾವ್, ಡಾ.ಪೂರ್ಣಾ ಪ್ರಸಾದ್ ಮತ್ತು ವಿದ್ವಾಂಸ ಕೇಶವ ತಾಡಪತ್ರಿ ಇದ್ದರು.
