ಲೋಕಬಂಧು ನ್ಯೂಸ್ | ಉಡುಪಿ, ಮೇ 19
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಲಾಗಿದ್ದ ಅಪೂರ್ವವಾದ ಮಹಾರುದ್ರ ಯಾಗದ ಪೂರ್ಣಾಹುತಿ ಮಂಗಳವಾರ ಬೆಳಿಗ್ಗೆ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ವೇ.ಮೂ. ಹಯವದನ ತಂತ್ರಿ ಪುತ್ತೂರು, ಮಧುಸೂದನ ತಂತ್ರಿ ಸುಬ್ರಹ್ಮಣ್ಯ ಭಟ್ ಹಾಗೂ ವಾದಿರಾಜ ತಂತ್ರಿ ನೇತೃತ್ವದಲ್ಲಿ ಯಾಗದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ದೇವಾಲಯದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಬೃಹತ್ ಹೋಮಕುಂಡದಲ್ಲಿ ಹೋಮ–ಹವನಾದಿಗಳು ನಡೆದರೆ, ಋತ್ವಿಜರಿಂದ ವೇದಮಂತ್ರ ಪಠಣ ಮುಗಿಲು ಮುಟ್ಟಿತ್ತು. ನೆರೆದ ಭಕ್ತಾದಿಗಳು ಭಾವಭಕ್ತಿಪೂರ್ಣ ಉದ್ಘೋಷಗಳನ್ನು ಮೊಳಗಿಸಿದರು. ಆ ಮೂಲಕ ಏಳು ದಶಕಗಳ ಬಳಿಕ ಕೊಡವೂರಿನಲ್ಲಿ ನಡೆದ ವೈಭವದ ಮಹಾರುದ್ರ ಯಾಗಕ್ಕೆ ನೆರೆದ ಜನತೆ ಸಾಕ್ಷಿಗಳಾದರು.
ಮಹಾರುದ್ರ ಯಾಗದ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ದಂಪತಿ ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ದಂಪತಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಹರಿದುಬಂದ ಭಕ್ತಜನ ಸಾಗರ
ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಮಹಾರುದ್ರ ಯಾಗದ ಕೊನೆಯ ದಿನವಾದ ಮಂಗಳವಾರ ದೇವಸ್ಥಾನ ಪರಿಸರ ಭಕ್ತಜನ ಸಾಗರಕ್ಕೆ ಸಾಕ್ಷಿಯಾಯಿತು.
ಬೆಳಗ್ಗಿನಿಂದಲೇ ಉಡುಪಿ ಜಿಲ್ಲೆ ಮತ್ತು ನೆರೆಯ ಜಿಲ್ಲೆಗಳ ವಿವಿಧ ಭಾಗಗಳಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಯಾಗ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ಮಹಾರುದ್ರ ಯಾಗದ ಪೂರ್ಣಾಹುತಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಪಾರಾಯಣ, ಹೋಮ ಹಾಗೂ ಮಂಗಳಾರತಿ ನೆರವೇರಿತು.
ಯಾಗಶಾಲೆಯ ಸುತ್ತಮುತ್ತ ವೇದಘೋಷ ಮೊಳಗುತ್ತಿದ್ದರೆ, ಭಕ್ತರು ಸರತಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಸ್ಥಾನದ ಆವರಣ, ಪ್ರಮುಖ ಬೀದಿಗಳು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.
ಮಹಾಅನ್ನಸಂತರ್ಪಣೆ
ಮಧ್ಯಾಹ್ನ ನಡೆದ ಮಹಾ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಭೋಜನ ಸ್ವೀಕರಿಸಿದರು. ಬೆಳಗ್ಗಿನಿಂದಲೇ ಅನ್ನದಾನ ಮಂಟಪದಲ್ಲಿ ಭಕ್ತರ ದಟ್ಟಣೆ ಕಂಡುಬಂದಿದ್ದು, ಸೇವಾ ಕಾರ್ಯಕರ್ತರು ಭಕ್ತರಿಗೆ ವ್ಯವಸ್ಥಿತವಾಗಿ ಅನ್ನಪ್ರಸಾದ ವಿತರಿಸಿದರು.
ಕೊನೆಯ ದಿನದ ಅನ್ನ ಸಂತರ್ಪಣೆಯಲ್ಲಿ ವಿಶೇಷವಾಗಿ ಉಪ್ಪಿನಕಾಯಿ, ಕೋಸಂಬರಿ, ಮಜ್ಜಿಗೆ, ಹಲಸಿನ ಕಾಯಿಯ ಪಲ್ಯ, ಸಾಂಬಾರು, ಮಡ್ಡಿ, ಪಂಚರತ್ನ, ವಡೆ ಹಾಗೂ ಪಾಯಸವನ್ನು ಭಕ್ತರಿಗೆ ವಿತರಿಸಲಾಯಿತು.
ಸಂಜೆ ದೀಪಾರಾಧನೆ ಪೂರ್ವಕ ರಂಗಪೂಜೆ ಹಾಗೂ ರಂಗಪೂಜೆ ಬಲಿ ಕಾರ್ಯಕ್ರಮಗಳು ನಡೆಯಲಿವೆ.
ಸಮಾರೋಪ ಸಮಾರಂಭದ ಬಳಿಕ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ 'ತುಳುನಾಡ ಗಾನ ಗಂಧರ್ವ' ಬಿರುದಾಂಕಿತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದಿಂದ ‘ಶಿವಗಾನ ಭಕ್ತಿ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ.
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)