ಲೋಕಬಂಧು ನ್ಯೂಸ್ | ಉಡುಪಿ, ಮೇ 27
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಕಂಡರೂ ಭಾರತದಲ್ಲಿ ಪೆಟ್ರೋಲ್ ದರ ಏರಿಕೆಯಾಗಿದ್ದು ಕೇಂದ್ರ ಸರಕಾರ ಗ್ರಾಹಕರ ಸುಲಿಗೆಗೆ ತೊಡಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರ್, ಪೆಟ್ರೋಲಿಯಂ ಖಾತೆ ಸಚಿವರು ತೈಲ ಸಂಗ್ರಹ ಚೆನ್ನಾಗಿದೆ ಎಂದರೂ ಕಳೆದ 11 ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 8 ರೂ.ನಷ್ಟು ಹೆಚ್ಚಾಗಿರುವುದು ವಿಪರ್ಯಸ.
2008ರಲ್ಲಿ ಕಾಂಗ್ರೆಸ್ ಸರಕಾರ ಕಚ್ಚಾತೈಲದ ಬೆಲೆ ಬ್ಯಾರೆಲ್'ಗೆ 147 ಡಾಲರ್ ತಲುಪಿದಾಗ ಸಬ್ಸಿಡಿ ನೀಡಿ ಜನತೆಗೆ ಆರ್ಥಿಕ ಹೊರೆ ಬೀಳದಂತೆ ಮುತುವರ್ಜಿ ವಹಿಸಿತ್ತು. ಆದರೆ, ಈಗ ಕಚ್ಚಾತೈಲ ಬೆಲೆ ಇಳಿದರೂ ಕೇಂದ್ರ ಸರಕಾರ ಕಳೆದ ಹತ್ತು ದಿನಗಳಲ್ಲಿ 4 ಕಂತುಗಳ ಮೂಲಕ 8 ರೂ.ನಷ್ಟು ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಹೊರೆಯಾಗಿಸಿದೆ. ಬೆಲೆ ಏರಿಕೆಯನ್ನು ದೇಶಕ್ಕಾಗಿ ಸಹಿಸಿಕೊಳ್ಳಿ ಎನ್ನುತ್ತಾ ಬಡವರನ್ನು ಬೀದಿಗೆ ತಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಆರ್ಥಿಕತೆ ಸದೃಢವಾಗಿದೆ. ನಾವು ಜನರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಹಣಕಾಸು ಸಚಿವೆ ಹೇಳಿಕೆ ನೀಡಿದರೆ, ಇನ್ನೊಂದಡೆ ದೇಶಕ್ಕೆ ಸಂಕಷ್ಟ ಕಾದಿದೆ ಎಂದು ಪ್ರಧಾನಮಂತ್ರಿ ಹೇಳಿಕೆ ನೀಡುತ್ತಾರೆ. ಈ ವಿಭಿನ್ನ ಹೇಳಿಕೆಗಳ ಮೂಲಕ ಕೇಂದ್ರ ಸರಕಾರ ಜನತೆಯನ್ನು ಹಾದಿತಪ್ಪಿಸುತ್ತಿದೆ.
ಈ ಹಿಂದಿನಂತೆ ರಷ್ಯಾ ಹಾಗೂ ಇರಾನ್'ನಿಂದ ಅಗ್ಗದ ತೈಲ ಯಾಕೆ ಖರೀದಿಸುತ್ತಿಲ್ಲ ಎನ್ನುವುದನ್ನು ಕೇಂದ್ರ ಜನತೆಗೆ ತಿಳಿಸಬೇಕು. ಕೇಂದ್ರದ ನಡೆ ಸಂಶಯಾಸ್ಪದವಾಗಿದೆ ಎಂದು ಭಾಸ್ಕರ ರಾವ್ ಕಿದಿಯೂರು ಆರೋಪಿಸಿದ್ದಾರೆ
