ಕಪ್ಪೆಚಿಪ್ಪು ಸಂಗ್ರಹಿಸಲು ತೆರಳಿದ್ದ ಹತ್ತು ಮಂದಿ ಜಲಸಮಾಧಿ

ಲೋಕಬಂಧು ನ್ಯೂಸ್ | ಕಾರವಾರ, ಮೇ 24
ಕಪ್ಪೆಚಿಪ್ಪು ಸಂಗ್ರಹಿಸಲು ವೆಂಕಟಾಪುರ ನದಿಗೆ ತೆರಳಿದ್ದ ವೇಳೆ ದಿಢೀರ್ ನೀರು ಏರಿಕೆಯಾಗಿ ಸಂಭವಿಸಿದ ದುರ್ಘಟನೆಯಲ್ಲಿ 10 ಮಂದಿ ಮೃತಪಟ್ಟಿರುವ ಘಟನೆ ಭಟ್ಕಳ ತಾಲೂಕಿನ ಶಿರಾಲಿ ತಟ್ಟಿಹಕ್ಕಲು ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಒಟ್ಟು 14 ಜನರ ತಂಡ ಕಪ್ಪೆಚಿಪ್ಪು ಸಂಗ್ರಹಿಸಲು ವೆಂಕಟಾಪುರ ನದಿಗೆ ತೆರಳಿತ್ತು. ಆ ವೇಳೆ ನದಿಯಲ್ಲಿ ನೀರಿನ ಮಟ್ಟ ದಿಢೀರನೆ ಏರಿಕೆಯಾದ ಕಾರಣ ಜನರು ನೀರಿನಲ್ಲಿ ಕೊಚ್ಚಿಹೋದರು.


7 ಮಹಿಳೆಯರು ಮತ್ತು 2 ಪುರುಷ ಸೇರಿ ​ಒಟ್ಟು 8 ಮಂದಿ ಮೃತಪಟ್ಟಿದ್ದು, ಓರ್ವ ಮಹಿಳೆ ಮತ್ತು ಓರ್ವ ಪುರುಷನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ರಕ್ಷಿಸಲಾಗಿದೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಮೃತಪಟ್ಟವರೆಲ್ಲ ಭಟ್ಕಳದ ಪಡುಶಿರಾಲಿ ಶಾರದಹೊಳೆ ನಿವಾಸಿಗಳಾಗಿದ್ದಾರೆ. ಲಕ್ಷ್ಮಿ ಮಾದೇವ ನಾಯ್ಕ (38), ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಂ ನಾಯ್ಕ (39), ಉಮೇಶ್ ಮಂಜುನಾಥ್ ನಾಯ್ಕ (42), ಮಾಸ್ತಮ್ಮ ಮಂಜುನಾಥ್ ನಾಯ್ಕ (43), ಲಕ್ಷ್ಮಿ ಅಣ್ಣಪ್ಪ ನಾಯ್ಕ (44), ಜ್ಯೋತಿ ನಾಗಪ್ಪ ನಾಯ್ಕ (37) ಮತ್ತು ಮಾಲತಿ ಜಟ್ಟಪ್ಪ ನಾಯ್ಕ (38) ಎಂದು ಗುರುತಿಸಲಾಗಿದೆ.


ಘಟನಾ ಸ್ಥಳಕ್ಕೆ ಭಟ್ಕಳ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.


ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.