ಲೋಕಬಂಧು ನ್ಯೂಸ್ | ಉಡುಪಿ, ಮೇ 23
ವಿಶೇಷ ಮಕ್ಕಳು ನಮ್ಮವರು ಎಂಬ ಭಾವನೆಯಿಂದ ಅವರ ಪ್ರಗತಿಗಾಗಿ ನಡೆಸುವ ಪ್ರಾಮಾಣಿಕ ಪ್ರಯತ್ನಗಳೂ ಮಾದರಿ ಸಮಾಜಸೇವೆಯಾಗಬಲ್ಲುದು ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದರು.
ವಿಶೇಷ ಮಕ್ಕಳ ಪೋಷಕರ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ (ಎನ್.ಸಿ.ಪಿ.ಒ) ಪರಿವಾರ್, ಮಾಹೆ ವಿ.ವಿ. ಅಧೀನದ ಆಸರೆ ಚಾರಿಟೆಬಲ್ ಟ್ರಸ್ಟ್, ಹೈದರಾಬಾದಿನ ಮೌಲಾನಾ ಆಝಾದ್ ನ್ಯಾಷನಲ್ ಉರ್ದು ವಿ.ವಿ. ವತಿಯಿಂದ ಎರಡು ದಿನಗಳ ಕಾಲ ಕುಂಜಿಬೆಟ್ಟು ಶಾರದಾ ರೆಸಿಡೆನ್ಶಿಯಲ್ ಸ್ಕೂಲಿನ ಸೌಪರ್ಣಿಕಾ ಸಭಾಂಗಣದಲ್ಲಿ ನಡೆಯುವ ಆರು ರಾಜ್ಯಗಳ 97ನೇ ಪ್ರಾದೇಶಿಕ ಪೋಷಕರ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ವಿಶೇಷ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಮಾನ ಅವಕಾಶ ಸಹಿತ ಪ್ರೋತ್ಸಾಹ ನೀಡಬೇಕು. ಸರಕಾರ, ಸಂಘಸಂಸ್ಥೆಗಳು, ದಾನಿಗಳ ಸಹಭಾಗಿತ್ವದಲ್ಲಿ ವಿಶೇಷ ಮಕ್ಕಳ ಬದುಕಿನ ಪರಿವರ್ತನೆ ಸಮಾಜಕ್ಕೆ ಹೊಸ ದಿಕ್ಕು ತೋರಬೇಕು.
ಉಡುಪಿಯಲ್ಲಿ ದಾನಿಗಳ ನೆರವಿನಿಂದ 14 ವಿಶೇಷ ಶಾಲೆಗಳು ನಡೆಯುತ್ತಿವೆ. ಬ್ರಹ್ಮಗಿರಿಯಲ್ಲಿ ವಿಶೇಷ ಮಕ್ಕಳಿಗಾಗಿ ರಾಜ್ಯ ಸರಕಾರ, ನಗರಸಭೆ ಹಾಗೂ ಸಿಎಸ್ಆರ್ ನೆರವಿನಿಂದ 4 ಕೋಟಿ ರೂ. ವೆಚ್ಚದಲ್ಲಿ ಸಮರ್ಥ ಪಾರ್ಕ್ ನಿರ್ಮಿಸಲಾಗುತ್ತಿದೆ ಎಂದರು.
ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ 25 ವರ್ಷಕ್ಕಿಂತ ಮೇಲಿನ ವಿಶೇಷ ಮಕ್ಕಳ ಕೌಶಲ ತರಬೇತಿ ಕೇಂದ್ರಕ್ಕೆ ಕೊಡುಗೆ ನೀಡಿದ ಉದ್ಯಮಿ ಪುರುಷೋತ್ತಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪರಿವಾರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಸುದೀಪ್ ಗೋಯಲ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಡಾ.ಉದಯ್ ಶೆಟ್ಟಿ, ಮಾಹೆ ಎಂಸಿಎಚ್.ಪಿ. ಪ್ರೊಫೆಸರ್ ಮತ್ತು ಡೀನ್ ಡಾ. ಅರುಣ್ ಮಯ್ಯ, ಎಸ್.ಆರ್.ಎಸ್ ನಿರ್ದೇಶಕ ವಿದ್ಯಾವಂತ ಆಚಾರ್ಯ, ಜಿಲ್ಲಾ ದಿವ್ಯಾಂಗರ ಸಬಲೀಕರಣ ಅಧಿಕಾರಿ ರತ್ನಾ, ರೋಟರಿ ಜಿಲ್ಲೆ 3182ರ ನಿಯೋಜಿತ ಗವರ್ನರ್ ಬಿ.ಎಂ. ಭಟ್, ಆಸರೆ ಚಾರಿಟೆಬಲ್ ಟ್ರಸ್ಟಿನ ಟ್ರಸ್ಟಿ ಶ್ರೀಧರ್ ಉಪಸ್ಥಿತರಿದ್ದರು.
ಅರ್ಚನಾ ಪ್ರಾರ್ಥನಾ ನೃತ್ಯ ಮಾಡಿದರು. ಸಮಾವೇಶದ ಸಂಘಟನಾ ಸಮಿತಿ ಸದಸ್ಯ ಕೆ.ಎಸ್. ಜೈವಿಠ್ಠಲ್ ಸ್ವಾಗತಿಸಿದರು. ರಮೇಶ್ ನಾಯ್ಕ್ ನಿರೂಪಿಸಿದರು. ಅರ್ಚನಾ ಟ್ರಸ್ಟಿನ ಟ್ರಸ್ಟಿ ಡಾ. ಪದ್ಮರಾಜ್ ಹೆಗ್ಡೆ ವಂದಿಸಿದರು.
