ಮೋದಿ ಸರ್ಕಾರದಿಂದ ಜನರಿಗೆ ಗ್ಯಾಸ್ ಸಿಲಿಂಡರ್ ಶಾಕ್!

ಲೋಕಬಂಧು ನ್ಯೂಸ್ | ಉಡುಪಿ, ಮೇ 2
ಪಂಚ ರಾಜ್ಯಗಳ ಚುನಾವಣೆ ಮುಗಿಯುವ ತನಕ ಕಾದು ಏಕಾಏಕಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು 993 ರೂ.ನಷ್ಟು ಭಾರೀ ಏರಿಕೆ ಮಾಡುವ ಮೂಲಕ ಕೇಂದ್ರದ ಮೋದಿ ಸರ್ಕಾರ ದೇಶದ ಜನತೆಗೆ ಶಾಕ್ ನೀಡಿದ್ದು, ಅದಕ್ಕೆ ಬಿಜೆಪಿ ನಾಯಕರು ಸ್ಪಷ್ಟನೆ ನೀಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುದ್ದವನ್ನು ನೆಪವಾಗಿರಿಸಿಕೊಂಡ ಕೇಂದ್ರದ ಬಿಜೆಪಿ ಸರಕಾರ, ಗ್ಯಾಸ್ ಪೊರೈಕೆಯಲ್ಲಿ ಸಮಸ್ಯೆ ಮಾಡಿದ್ದಲ್ಲದೆ ಮಾರ್ಚ್ ತಿಂಗಳಲ್ಲಿ ರೂ.114 ಏರಿಸಿದರೆ ಏಪ್ರಿಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ರೂ.195ಕ್ಕೆ ಏರಿಸಿ ಈಗ ಪುನಃ ಮೇ ತಿಂಗಳಿಗೆ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಮತ್ತೆ ರೂ.993ಕ್ಕೆ ಏರಿಸುವ ಮೂಲಕ ನರೇಂದ್ರ ಮೋದಿ ಬೆಲೆ ಏರಿಕೆಯಲ್ಲಿ ನೂತನ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.


ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ ರೂ.993ಗಳಷ್ಟು ಭಾರಿ ಏರಿಕೆ  ಕಂಡಿದ್ದು ಅದರಿಂದ ಹೋಟೆಲ್ ಮಾಲೀಕರು ಮತ್ತು ಜನಸಾಮಾನ್ಯರಿಗೆ ಮತ್ತೊಂದು ಆಘಾತ ನೀಡಿದೆ. ಈ ಬೆಲೆ ಏರಿಕೆ ಹೋಟೆಲ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು ಊಟ, ತಿಂಡಿ ಮತ್ತು ಪಾನೀಯಗಳ ಬೆಲೆಗಳು ಹೆಚ್ಚಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅದರಿಂದ ಸಾಮಾನ್ಯ ಜನರು ಪರಿಸ್ಥಿತಿ ಇನ್ನಷ್ಟು ಕೆಟ್ಟ ಹಂತಕ್ಕೆ ತಲುಪಲಿದ್ದು ಬಿಜೆಪಿಯವರ ನಾಟಕಕ್ಕೆ ಜನರು ಬೀದಿಗೆ ಬಂದು ಪ್ರತಿಭಟಿಸುವ ದಿನ ದೂರವಿಲ್ಲ ಎಂದು ಕಾಂಚನ್ ಎಚ್ಚರಿಸಿದ್ದಾರೆ.