ಕನ್ನಡ ಶಾಲೆಗಳ ಬಗ್ಗೆ ಸರ್ಕಾರಗಳ ದಿವ್ಯ ನಿರ್ಲಕ್ಷ್ಯ

ಲೋಕಬಂಧು ನ್ಯೂಸ್ | ಉಡುಪಿ, ಮೇ 3
ಕನ್ನಡ ಶಾಲೆಗಳ ಬಗ್ಗೆ ಸರ್ಕಾರಗಳು ದಿವ್ಯ ನಿರ್ಲಕ್ಷ್ಯ ವಹಿಸಿವೆ. ಅವುಗಳ ಬೆಳವಣಿಗೆಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯನ್ನು ನಿರೀಕ್ಷಿಸುವುದು ಹೇಗೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ ಆಳ್ವ ವಿಷಾದಿಸಿದರು.
ನಗರದ ಕುಂಜಿಬೆಟ್ಟು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಘಟಕ ಆಶ್ರಯದಲ್ಲಿ ನಡೆದ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ 16ನೇ ಅಧಿವೇಶನ ಭೀಷ್ಮೋತ್ಸವ ಉದ್ಘಾಟಿಸಿ ಮಾತನಾಡಿದರು.


ಕರ್ನಾಟಕದಲ್ಲಿ ಕನ್ನಡ ಶಾಲೆಗಳಿಗೆ ಮಕ್ಕಳು ಬರುವುದಿಲ್ಲ ಎನ್ನುವುದು ಸುಳ್ಳು. ಆಳ್ವಾಸ್ ಶಿಕ್ಷಣ ಸಂಸ್ಥೆ ಕಳೆದ 14 ವರ್ಷದಿಂದ ಕನ್ನಡ ಮಾಧ್ಯಮ ಶಾಲೆ ಆರಂಭಿಸಿದ್ದು ವಾರ್ಷಿಕ 24 ಸಾವಿರಕ್ಕೂ ಅಧಿಕ ಪ್ರವೇಶಾತಿ ಅರ್ಜಿ ಬರುತ್ತಿದೆ. ಆದರೆ, ಇದುವರೆಗೆ ಈ ಬಗ್ಗೆ ಸರ್ಕಾರದ ಯಾವುದೇ ಸಚಿವ, ಪ್ರತಿನಿಧಿ ಅಥವಾ ಶಿಕ್ಷಣ ಇಲಾಖೆ ಗಮನಹರಿಸಿಲ್ಲ ಎಂದು ವಿಷಾದಿಸಿದರು.


ರಾಜ್ಯದ ವಿವಿಧ ಕಂಪನಿಗಳು ತಮ್ಮ ಸಿಆರ್.ಎಸ್ ನಿಧಿಯಲ್ಲಿ ಒಂದಂಶವನ್ನು ಕನ್ನಡ ಶಾಲೆಗಳಿಗಾಗಿ ಮೀಸಲಿಡಬೇಕು. ತಮಗೆ ವಹಿಸಿಕೊಟ್ಟಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಲು ಸಿದ್ಧ ಎಂದು ಡಾ. ಆಳ್ವ ಹೇಳಿದರು.


ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಕಲಾವಿದ ಡಾ.ಭಾಸ್ಕರಾನಂದ ಕುಮಾರ್, ಕನ್ನಡದ ಬೆಳವಣಿಗೆಯಲ್ಲಿ ಯಕ್ಷಗಾನದ ಪಾತ್ರವೂ ಇದೆ. ಉಡುಪಿಯಲ್ಲಿ ಆಗಿಹೋದ ಅನೇಕ ಸಾಹಿತಿಗಳು, ವಿದ್ವಾಂಸರು ಕನ್ನಡದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.


ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆಗೊಳಿಸಿ, ಕನ್ನಡ ಶಾಲೆಗಳು ಉಳಿದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿದೀತು ಎಂದರು.


ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಭುವನಪ್ರಸಾದ ಹೆಗ್ಡೆ, ಕರ್ಣಾಟಕ ಬ್ಯಾಂಕ್ ಎಜಿಎಂ ರಮೇಶ ವೈದ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ ಅಭ್ಯಾಗತರಾಗಿದ್ದರು.


ಕಸಾಪ ಕಾರ್ಯದರ್ಶಿ ರಂಜನಿ ವಸಂತ್, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ನಳಿನಿ ಭಾಸ್ಕರಾನಂದ ಕುಮಾರ್ ವೇದಿಕೆಯಲ್ಲಿದ್ದರು.


ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ಸತೀಶ ಕೊಡವೂರು ಸ್ವಾಗತಿಸಿ, ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಕಸಾಪ ಉಡುಪಿ ಘಟಕ ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಸ್ತಾವನೆಗೈದರು. ಕಸಾಪ ಗೌರವ ಪುರಸ್ಕೃತರನ್ನು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಪರಿಚಯಿಸಿದರು.


ಆಸ್ಟ್ರೋ ಮೋಹನ್ ಮತ್ತು ಜನಾರ್ದನ ಕೊಡವೂರು ನೇತೃತ್ವದಲ್ಲಿ ಛಾಯಾಚಿತ್ರ ಪ್ರದರ್ಶನ, ಸಮ್ಮೇಳನಾಧ್ಯಕ್ಷರ ನುಡಿಚಿತ್ರ, ಸಾಧಕರಿಗೆ ಸನ್ಮಾನ ಇತ್ಯಾದಿ ನಡೆಯಿತು.


ಅದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ರಕ್ಷಣೆ ಒದಗಿಸಿದ್ದರು. ಆದರೆ ಸಮ್ಮೇಳನ ನಿರಾತಂಕವಾಗಿ ನಡೆಯಿತು.