ಭಗವಂತನ ಅನುಗ್ರಹ ಅತೀ ಅಗತ್ಯ

ಲೋಕಬಂಧು ನ್ಯೂಸ್ | ಪಡುಬಿದ್ರಿ, ಮೇ 1
ಪ್ರತಿಯೊಬ್ಬರಿಗೂ ದೇವರ ಆನುಗ್ರಹ ನಿತ್ಯ ನಿರಂತರ ಬೇಕು. ರುದ್ರ ದೇವರು ಮತ್ತು ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವದ ಪರ್ವಕಾಲದಲ್ಲಿ ಗ್ರಾಮದ ಎಲ್ಲರ ಸಹಕಾರದಿಂದ ದೊಡ್ಡ ಉತ್ಸವ ನಡೆಯುವ ಪರ್ವಕಾಲ ಸನ್ನಿಹಿತವಾಗಿದ್ದು, ನಮ್ಮೆಲ್ಲರ ಸಕಲ ಸಂಕಷ್ಟಗಳನ್ನು ದೂರೀಕರಿಸಿ ಸಕಲರಿಗೆ ದೇವರು ಸುಭಿಕ್ಷೆ-ಒಳಿತನ್ನು ಕರುಣಿಸಲಿ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶಿಸಿದರು.
ಸುಮಾರು 33 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಂಡ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸುಸಂದರ್ಭದಲ್ಲಿ ಶುಕ್ರವಾರ ಕ್ಷೇತ್ರಕ್ಕಾಗಮಿಸಿದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಿ ಸಂಸ್ಥಾನ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.


ನವಕ ಕಲಶಾಭಿಷೇಕ
ಬ್ರಹ್ಮಕುಂಭಾಭಿಷೇಕ ಅಂಗವಾಗಿ ವಿವಿಧ ಯಜ್ಞಯಾಗಾದಿಗಳು, ನವಕ ಕಲಶಾಭಿಷೇಕ ಶ್ರೀಕ್ಷೇತ್ರದ ತಂತ್ರಿಗಳಾದ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮದಂಗವಾಗಿ ಶ್ರೀಸನ್ನಿಧಿಯಲ್ಲಿ ಅಷ್ಟೋತ್ತರ ಶತನಾರಿಕೇಳ ಗಣಯಾಗ, ಮಹಾರುದ್ರಯಾಗ, ತತ್ವಹೋಮ, ತತ್ವಕಲಶ ಪ್ರತಿಷ್ಠೆ, ನವಕಪ್ರಧಾನ ಯಾಗ, ತತ್ವಕಲಶಾಭಿಷೇಕ, ಪ್ರಸನ್ನ ಪೂಜೆ, ನ್ಯಾಸಪೂಜೆ, ಮಹಾಪೂಜೆ, ಬಲಿ, ಗಣಪತಿ ದೇವರ ಶಾಂತಿಯಾಗ, ಪ್ರಾಯಶ್ಚಿತ್ತ ಯಾಗ, ಮೂರ್ತಿಯಾಗ, ಪಂಚಬ್ರಹ್ಮಯಾಗ, ಆಥರ್ವಶೀರ್ಷ ಗಣಯಾಗ, ನವಕ ಪ್ರಧಾನ ಕಲಶಾಭಿಷೇಕ, ಪ್ರಸನ್ನ ಪೂಜೆ ಜರಗಿತು.
ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ಸಂಜೆ ದುರ್ಗಾರಾಧನೆ, ಗಣಪತಿ ದೇವರ ಬ್ರಹ್ಮಕಲಶ ಮಂಟಪ ಸಂಸ್ಕಾರ, ರಾತ್ರಿ ಪೂಜೆ, ಬಲಿ, ಮರು ಆಯನ ಬಲಿ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪ್ರಕಾಶ ಶೆಟ್ಟಿ, ದೇವಳದ ಆನುವಂಶಿಕ ಮೊಕ್ತೇಸರರಾದ ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳ್, ಪೇಟೆಮನೆ ಭವಾನಿಶಂಕರ್ ಹೆಗ್ಡೆ, ಕೊರ್ನಾಯ ಶ್ರಿಪತಿ ರಾವ್, ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಎಚ್.ಪದ್ಮನಾಭ ಭಟ್ ಮತ್ತು ವೈ.ಗುರುರಾಜ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುರಳೀನಾಥ ಶೆಟ್ಟಿ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಮುಂಬೈ, ಬೆಂಗಳೂರು ಸಹಿತ ವಿವಿಧ ಉಪಸಮಿತಿಗಳ ಸಂಚಾಲಕರು, ಸರ್ವ ಸದಸ್ಯರು ಊರಿನ ಹತ್ತು ಸಮಸ್ತರು, ಭಕ್ತರು ಉಪಸ್ಥಿತರಿದ್ದರು.