ಲೋಕಬಂಧು ನ್ಯೂಸ್ ಉಡುಪಿ, ಮೇ 6
ವೈದ್ಯಕೀಯ ಕ್ಷೇತ್ರದ ಬಗ್ಗೆ ಪರಿಣತಿ ಇಲ್ಲದ ಅನೇಕರು ಸಾಮಾಜಿಕ ಮಾಧ್ಯಮಗಳ ಮೂಲಕ ಟಿಪ್ಸ್ ಹೆಸರಿನಲ್ಲಿ ಅರೆಬೆಂದ ಮಾಹಿತಿ ಹಂಚಿಕೊಳ್ಳುತ್ತಿರುವುದು ಅಪಾಯಕಾರಿ. ಈಚಿನ ದಿನಗಳಲ್ಲಿ ಅದು ಆರೋಗ್ಯ ಕ್ಷೇತ್ರಕ್ಕೆ ಸವಾಲಾಗಿದೆ ಎಂದು ಹಿರಿಯ ಸಾಹಿತಿ, ಭಾರತೀಯ ವೈದ್ಯಕೀಯ ಸಂಘದ ವೈದ್ಯ ಬರಹಗಾರರ ಸಮಿತಿ ಅಧ್ಯಕ್ಷೆ ಡಾ.ಇಂದಿರಾ ದೊಡ್ಡಬಳ್ಳಾಪುರ ಹೇಳಿದರು.ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ ವತಿಯಿಂದ ಉಡುಪಿ ಜಿಲ್ಲಾ ವೈದ್ಯ ಸಾಹಿತಿಗಳು ಹಾಗೂ ಸಾಹಿತ್ಯ ಪ್ರಿಯರ ಸಹಕಾರದೊಂದಿಗೆ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಉಡುಪಿ ಜಿಲ್ಲಾ ವೈದ್ಯ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದ ವಿಷಯವನ್ನು ಸರಳವಾಗಿ ಜನಸಾಮಾನ್ಯರಿಗೆ ಮುಟ್ಟಿಸಿ ಸ್ವಸ್ಥ ಸಮಾಜ ನಿರ್ಮಿಸುವ ಗುರುತರ ಜವಾಬ್ದಾರಿ ವೈದ್ಯರ ಮೇಲಿದೆ. ಆರೋಗ್ಯದ ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಮಸ್ಯೆ ಸೃಷ್ಟಿಸಲಾಗುತ್ತಿದೆ. ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಬಂಜೆತನ, ಮಾನಸಿಕ ಖಿನ್ನತೆ ಸಹಿತ ವಿವಿಧ ರೋಗಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲದೇ ಕೆಲವು ವ್ಯಕ್ತಿಗಳು ಸಲಹೆ, ಸೂಚನೆ ನೀಡುತ್ತಾರೆ. ಅದರಿಂದ ಸಾಕಷ್ಟು ಸಮಸ್ಯೆಯಾಗಿ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದರು.
ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ ಅಧ್ಯಕ್ಷ ಡಾ.ಅಶೋಕ್ ಕುಮಾರ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಉಪಾಧ್ಯಕ್ಷ, ಹಿರಿಯ ಸಾಹಿತಿ ಡಾ.ಎಂ. ಅಣ್ಣಯ್ಯ ಕುಲಾಲ್ ಉಲ್ತೂರ್, ಖ್ಯಾತ ಮಾನಸಿಕ ತಜ್ಞೆ ನಾಟ್ಯ ಕಲಾವಿದೆ ಡಾ. ಪವಿತ್ರಾ ಕೆ.ಎಸ್., ಭಾರತೀಯ ವೈದ್ಯಕೀಯ ಸಂಘ ಕಾರ್ಕಳ ಅಧ್ಯಕ್ಷೆ ದಿಶಾ ಕಿಶನ್, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಮಹಿಳಾ ಘಟಕ ಕಾರ್ಯದರ್ಶಿ ಡಾ. ಮಾನಸ್ ಇ.ಆರ್., ಕೋಶಾಧಿಕಾರಿ ಡಾ.ಸನತ್ ರಾವ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ವೈದ್ಯ ಸಾಹಿತ್ಯ ಸಮ್ಮೇಳನ ಸಮಿತಿ ಸದಸ್ಯ, ಸಂಘಟಕ ಡಾ.ವೈ.ಸುದರ್ಶನ್ ರಾವ್ ಸ್ವಾಗತಿಸಿದರು. ಡಾ.ರಂಜಿತಾ ಎಸ್.ನಾಯಕ್, ಡಾ. ವೀಣಾ ನರೇಂದ್ರ, ಡಾ.ಮಮತಾ ಸನತ್ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಸ್ತ್ರೀರೋಗ ತಜ್ಞೆ ಹಾಗೂ ಸಾಹಿತಿ ಡಾ. ಸಾವಿತ್ರಿ ದೈತೋಟ ಅವರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮ ಬಳಿಕ ಸ್ವರಚಿತ ಕವನ ವಾಚನ, ಲಲಿತಕಲೆಯಿಂದ ಆರೋಗ್ಯ ವೃದ್ಧಿ ಕುರಿತು ಕಾಯರ್ಾಗಾರ, ಹಾಸ್ಯಸಂಜೆ, ವೈದ್ಯಪುಸ್ತಕ ಪ್ರಕಾಶಕರ ಚಚರ್ಾಗೋಷ್ಠಿ, ಬಹುಮಾನ ವಿತರಣೆ ಹಾಗೂ ಸಮಾರೋಪ, ಸದಸ್ಯರಿಂದ ಲಘುಸಂಗೀತ ಕಾರ್ಯಕ್ರಮ ನಡೆಯಿತು.