ಹಿಜಾಬ್ ಮರುಜಾರಿ: ನ್ಯಾಯಾಂಗ ನಿಂದನೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 15
ಹಿಂದಿನ‌ ಸರ್ಕಾರ 2022ರಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತಂದಿತ್ತು. ಆ ವಿಚಾರ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಸಂದರ್ಭದಲ್ಲೇ ಸರ್ಕಾರ ಆದೇಶವನ್ನು ವಾಪಾಸ್ ಪಡೆದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸಿರುವುದು ಸಂವಿಧಾನ ವಿರೋಧಿಯಷ್ಟೇ ಅಲ್ಲ, ನ್ಯಾಯಾಂಗ ನಿಂದನೆಯೂ ಆಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಉಪ ಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಕೊಟ್ಟ ಕಪಾಳಮೋಕ್ಷದ ನೋವನ್ನು ಮರೆಯುವುದಕ್ಕಾಗಿ ಈಗ ಸಿದ್ದರಾಮಯ್ಯ ಸರ್ಕಾರ ಒಂದಾದ ಮೇಲೊಂದರಂತೆ ಮುಸ್ಲಿಂ ತುಷ್ಟೀಕರಣ ನಡೆಸುತ್ತಿದೆ.


ಹಿಜಾಬ್ ಧಾರಣೆಗೆ ಅವಕಾಶ ನೀಡುವ ಮೂಲಕ ರಾಜ್ಯ ದಿಂದ ಮತ್ತೊಮ್ಮೆ ಮುಸ್ಲಿಂ ಓಲೈಕೆ ಪ್ರಕಟವಾಗಿದೆ.


ಕಳೆದ ಬಾರಿ ಕ್ಯಾಬಿನೆಟ್ ಸಭೆಯಲ್ಲಿ ಮುಸ್ಲಿಂ ಕಾಲನಿಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಕೊಡಲಾಗಿತ್ತು. ಅದರ ಬೆನ್ನಲ್ಲೇ ಈಗ ಹಿಜಾಬ್'ಗೆ ಅವಕಾಶ ನೀಡಲಾಗಿದೆ. ತನ್ನ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವುದಕ್ಕಾಗಿ ದೇಶದ ಸಮಗ್ರತೆ ಹಾಗೂ ಸಂವಿಧಾನವನ್ನು ಒತ್ತೆಇಡಲು ಹೇಸದ ಕಾಂಗ್ರೆಸಿರಿಗೆ ಈಗ ಮತ್ತೆ ಹಿಜಾಬ್ ಧ್ಯಾನ ಶುರುವಾಗಿದೆ.


ಈ ಆದೇಶ ಎಷ್ಟು ಗೊಂದಲದ ಗೂಡಾಗಿದೆ ಎಂದರೆ ಸಮವಸ್ತ್ರದ ಮೂಲ ಉದ್ದೇಶವನ್ನು ಬದಲಾಯಿಸಬಾರದು ಅಥವಾ ಹಾಳು ಮಾಡಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಹಿಜಾಬ್ ಧರಿಸಿದರೆ ಸಮವಸ್ತ್ರದ ಮೂಲ ಕಲ್ಪನೆಯೇ ವ್ಯತ್ಯಾಸವಾಗುತ್ತದೆ. ಸರ್ಕಾರಕ್ಕೆ ನಿರ್ದಿಷ್ಟ ಶೈಕ್ಷಣಿಕ ಧೋರಣೆಯೇ ಇಲ್ಲ. ಸಾಮಾಜಿಕ ಸಾಮರಸ್ಯ ಕದಡುವ ವಿಷ ಕಕ್ಕುವುದೇ ಸಿದ್ದರಾಮಯ್ಯ ಸರ್ಕಾರದ ಕಸುಬಾಗಿ ಬಿಟ್ಟಿದೆ.


ಇಂಥ ಓಲೈಕೆ ರಾಜಕಾರಣದಿಂದ ದೇಶಾದ್ಯಂತ `ಕಸ'ವಾಗಿರುವ ಕಾಂಗ್ರೆಸ್ ಸದ್ಯದಲ್ಲಿ ರಾಜ್ಯದಲ್ಲೂ ಮೂಲೆಗೆ ಸೇರುವ ದಿನಗಣನೆ ಈ ಆದೇಶದೊಂದಿಗೆ ಪ್ರಾರಂಭವಾಗಿದೆ. ಅತಿಯಾದ ಓಲೈಕೆ ಮಾಡಿದಕ್ಕಾಗಿ ಪಶ್ಚಿಮ ಬಂಗಾಲ ಹಾಗೂ ಇತರ ರಾಜ್ಯಗಳಲ್ಲಿ ಕಥೆ ಏನಾಗಿದೆ ಎಂಬುದನ್ನು ಕಾಂಗ್ರೆಸ್ ಮರೆಯದಿರಲಿ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.