ರಂಗಭೂಮಿಗೆ ಹೊಸ ಭಾಷೆ ಇಂದಿನ ತುರ್ತು

ಲೋಕಬಂಧು ನ್ಯೂಸ್ | ಉಡುಪಿ, ಮೇ 24
ರಂಗಭೂಮಿ ಮುಂದೆ ಕೃತಕ ಬುದ್ದಿಮತ್ತೆ, ಯುವಜನತೆಯ ಯೋಚನೆ, ಸೃಜನಶೀಲತೆ, ವಿಶುವಲ್ ಮಿಡಿಯಾ ಸೇರಿದಂತೆ ಹಲವು ಸವಾಲುಗಳಿವೆ. ರಂಗಭೂಮಿಯ ತುರ್ತುಗಳನ್ನು ಹೊಸ ವ್ಯಾಖ್ಯಾನ, ಹೊಸ ನಾಟಕ ಕಟ್ಟುವ ಹಾಗೂ ಹೊಸ ರಂಗ ಪ್ರಯೋಗಗಳನ್ನು ಸೃಷ್ಟಿಸುವ ಮೂಲಕ ಎದುರಿಸಬೇಕು. ಅದು ಇಂದಿನ ಅಗತ್ಯ. ರಂಗಭೂಮಿಗೆ ಹೊಸ ಭಾಷೆಯನ್ನು ಕಂಡುಕೊಳ್ಳಬೇಕಾಗಿರುವುದು ಇಂದಿನ ತುರ್ತು ಎಂದು ರಂಗಾಯಣ ಶಿವಮೊಗ್ಗದ ನಿರ್ದೇಶಕ ಪ್ರಸನ್ನ ಡಿ. ಸಾಗರ ಹೇಳಿದರು.
ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಉಡುಪಿ ವತಿಯಿಂದ ನಗರದ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ರಂಗಾಯಣ ಶಿವಮೊಗ್ಗ ಪ್ರಸ್ತುತಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಕಾದಂಬರಿ ಸ್ವಾತಂತ್ರ್ಯದ ಓಟ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.


ಮನುಷ್ಯತ್ವ ಪ್ರೀತಿ, ಸೌಹಾರ್ದತೆ, ಭ್ರಾತೃತ್ವವನ್ನು ನಾಟಕದ ಮೂಲಕ ಬೆಳೆಸುವುದು ಮುಖ್ಯ. ಆದ್ದರಿಂದ ಪ್ರೊಪಗಾಂಡ ನಾಟಕ ಮಾಡುವ ಆವಶ್ಯಕತೆ ಇಲ್ಲ ಎಂದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಕಾರ್ಯಕ್ರಮ ಉದ್ಘಾಟಿಸಿದರು.


ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಸಂಸ್ಥೆಯ ನಾಟಕ ವಿಭಾಗದ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ನಟರಾಜ ಹೊನ್ನವಳ್ಳಿ ನಿರ್ದೇಶನದ 'ಸ್ವಾತಂತ್ರ್ಯದ ಓಟ' ನಾಟಕ ಪ್ರದರ್ಶನಗೊಂಡಿತು.