ಹೆದ್ದಾರಿಯಲ್ಲಿ 6 ಕಡೆ ರಾಡಾರ್ ಕ್ಯಾಮೆರ ಅಳವಡಿಕೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 24
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರು ಕಡೆಗಳಲ್ಲಿ ಅತ್ಯಾಧುನಿಕ ಸ್ಪೀಡ್ ರಾಡಾರ್ ಕ್ಯಾಮೆರ ಅಳವಡಿಸಿದ್ದು, ಅವುಗಳು ಕಾರ್ಯಾರಂಭ ಮಾಡಿವೆ. ಅವುಗಳ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ಜಿಲ್ಲಾ ನಿಯಂತ್ರಣ ಕೊಠಡಿಗಳಲ್ಲಿ ಮಾನಿಟರ್ ಮಾಡಿ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ ಚಲನ್'ಗಳನ್ನು ಅಂಚೆ ಮೂಲಕ ಕಳಿಸಲಾಗುತ್ತದೆ ಎಂದು ಎಸ್.ಪಿ. ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಇನ್ನೂ 14 ಸ್ಥಳಗಳನ್ನು ಗುರುತಿಸಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೇ ವರ್ಕ್ ಆರ್ಡರ್ ನೀಡಲಾಗುವುದು.


ಪ್ರಸ್ತುತ ಕಾರ್ಕಳದ ಧೂಪದಕಟ್ಟೆ (ವೇಗದ ಮಿತಿ ಗಂಟೆಗೆ 60 ಕಿ.ಮೀ.), ಪಡುಬಿದ್ರೆಯ ಉಚ್ಚಿಲ (80 ಕಿ.ಮೀ.), ಕಾಪುವಿನ ದಂಡತೀರ್ಥ ಶಾಲೆ ಬಳಿ (80 ಕಿ.ಮೀ.), ಕೋಟದ ತೆಕ್ಕಟ್ಟೆ (80 ಕಿ.ಮೀ.), ಗಂಗೊಳ್ಳಿಯ ತ್ರಾಸಿ (80 ಕಿ.ಮೀ.) ಹಾಗೂ ಬೈಂದೂರಿನ ನಾಯಕನಕಟ್ಟೆ (ವೇಗದ ಮಿತಿ ಗಂಟೆಗೆ 80 ಕಿ.ಮೀ.)ಗಳಲ್ಲಿ ಅಳವಡಿಸಲಾಗಿದೆ. ವೇಗದ ಮಿತಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಮ ಹಾಗೂ ಹೆದ್ದಾರಿ ನಿಯಮಗಳನ್ವಯ ಅಳವಡಿಸಲಾಗಿದೆ ಎಂದೂ ಎಸ್ಪಿ ತಿಳಿಸಿದ್ದಾರೆ.


ಸ್ಪೀಡ್ ರಾಡಾರ್ ಪತ್ತೆ ಮಾಡುವ ಸಂಚಾರ ಉಲ್ಲಂಘನೆಗಳಲ್ಲಿ ಅತಿವೇಗದ ಚಾಲನೆ, ಟ್ರಿಪಲ್ ರೈಡಿಂಗ್, ಸೀಟ್ ಬೆಲ್ಟ್ ಉಲ್ಲಂಘನೆ, ಹೆಲ್ಮೆಟ್ ಉಲ್ಲಂಘನೆ, ಮೊಬೈಲ್ ಬಳಸಿ ಚಾಲನೆ, ವಿರುದ್ಧ ದಿಕ್ಕಿನಲ್ಲಿ ಚಾಲನೆ ಹಾಗೂ ಇತರ ಸಂಚಾರ ನಿಯಮಗಳ ಉಲ್ಲಂಘನೆಗಳು ಸೇರಿವೆ. ವಿಧಿಸಲಾದ ದಂಡವನ್ನು ಸಮೀಪದ ಠಾಣೆಗಳಲ್ಲಿ ಪಾವತಿಸಬಹುದು ಎಂದು ಎಸ್.ಪಿ. ತಿಳಿಸಿದ್ದಾರೆ.