ಲೋಕಬಂಧು ನ್ಯೂಸ್ | ಉಡುಪಿ, ಮೇ 12
ರೈತರಿಗೆ ಸೋಲಾರ್ ಮೂಲಕ ವಿದ್ಯುತ್ ಒದಗಿಸುವ ಪಿ.ಎಮ್. ಕುಸುಮ್-ಸಿ ಯೋಜನೆಯಡಿ ಮಂಜೂರಾದ ಉಡುಪಿ ಜಿಲ್ಲೆಯ 3 ಸೋಲಾರ್ ಘಟಕ ಅರಣ್ಯ ಇಲಾಖೆಯ ಗೊಂದಲದಿಂದಾಗಿ ನೆನೆಗುದಿಗೆ ಬಿದ್ದಿದ್ದು, ಕೇಂದ್ರ ಸರ್ಕಾರದ ಯೋಜನೆಯ ತುರ್ತು ಅನುಷ್ಠಾನಕ್ಕಾಗಿ ಮಧ್ಯಪ್ರವೇಶಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಈಚೆಗೆ ನಡೆದ ಉಡುಪಿ ಜಿಲ್ಲೆಯ ದಿಶಾ ಪ್ರಗತಿ ಪರಿಶೀಲನ ಸಭೆಯಲ್ಲಿ ಕೇಂದ್ರ ಸರ್ಕಾರದ ಕುಸುಮ್-ಸಿ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಸಭೆಯಲ್ಲಿ ಚರ್ಚಿಸಲಾಗಿತ್ತು. ಈಗಾಗಲೇ ಕಂದಾಯ ಇಲಾಖೆ ನಿವೇಶನ ಗುರುತಿಸಿ ಆದೇಶ ಹೊರಡಿಸಿದ್ದರೂ ಅರಣ್ಯ ಇಲಾಖೆ ಅಲ್ಲಿದ್ದ ಸಣ್ಣಪುಟ್ಟ ಮರಗಿಡಗಳನ್ನು ತೆರವುಗೊಳಿಸದೇ ಹಠಮಾರಿತನ ಪ್ರದರ್ಶಿಸುತ್ತಿದ್ದು, ತಕ್ಷಣ ಈ ಸಮಸ್ಯೆ ಬಗೆಹರಿಸಿ ರೈತರ ಒಳಿತಿಗಾಗಿ ಕೇಂದ್ರ ಸರ್ಕಾರದ ಕುಸುಮ್-ಸಿ ಯೋಜನೆ ಅನುಷ್ಠಾನಗೊಳಿಸಲು ದಿಶಾ ಸಭೆಯಲ್ಲಿ ನಿರ್ಣಯಿಸಿರುವುದನ್ನು ಉಲ್ಲೇಖಿಸಿ, ಸುಮಾರು 20 ಕೋ.ರೂ. ವೆಚ್ಚದ ಈ ಯೋಜನೆ ಅನುಷ್ಠಾನವಾಗದಿದ್ದಲ್ಲಿ ರೈತರಿಗೆ ಅನ್ಯಾಯವಾಗುತ್ತದೆ.
ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾ ಅಭಿಯಾನ್ ಯೋಜನೆಗಾಗಿ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದಲ್ಲಿ 13 ಎಕ್ರೆ, ಬ್ರಹ್ಮಾವರ ತಾಲೂಕಿನ ಕಾವಡಿ ಗ್ರಾಮದಲ್ಲಿ 5 ಎಕ್ರೆ, ಕಾಪು ತಾಲೂಕಿನ ಬೆಳ್ಳೆ ಗ್ರಾಮದಲ್ಲಿ 9 ಎಕ್ರೆ ಜಾಗ ಮೀಸಲಿರಿಸಲಾಗಿತ್ತು.
ಕಂದಾಯ ಇಲಾಖೆ ಜಾಗ ಗುರುತಿಸಿ, ಮೆಸ್ಕಾಂ ಇಲಾಖೆಗೆ ವರ್ಗಾಯಿಸುವ ಹಂತದದಲ್ಲಿ ಅರಣ್ಯ ಇಲಾಖೆ ಗೊಂದಲ ಉಂಟುಮಾಡಿದೆ. ಕಿರಿಮಂಜೇಶ್ವರ ಮತ್ತು ಬೆಳ್ಳೆ ಗ್ರಾಮದಲ್ಲಿ ಜಾಗ ಸಮತಟ್ಟು ಮಾಡುವ ಮೊದಲು ಅಲ್ಲಿದ್ದ ಅಕೇಶಿಯಾ ಗಿಡ ಕಡಿಯಲು ಪಂಚಾಯತ್‌ನಿಂದ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅರಣ್ಯ ಇಲಾಖೆ ಅನುಮತಿ ನೀಡದೆ, ಡೀಮ್ಡ್ ಫಾರೆಸ್ಟ್ ಎಂದು ಸಮಸ್ಯೆ ಸೃಷ್ಟಿಸಿದೆ.
ದಿಶಾ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಎ.ಸಿ. ಯವರು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದರೂ ಸಮಸ್ಯೆ ಪರಿಹಾರವಾಗದೇ ಅರಣ್ಯ ಇಲಾಖೆಯವರು ವಿನಾಕಾರಣ ವಿಳಂಬ ಮಾಡಿ ಕೇಂದ್ರ ಸರ್ಕಾರದ ಯೋಜನೆಯ ಅನುಷ್ಠಾನ ಮತ್ತು ಅನುದಾನ ವಾಪಾಸು ಹೋಗುವ ಸಮಸ್ಯೆ ಸೃಷ್ಟಿಸಿದ್ದಾರೆ.
ಈ ಬಗ್ಗೆ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ಮತ್ತು ದೂರವಾಣಿ ಮೂಲಕ ಮಾಹಿತಿ ಒದಗಿಸಿ ಸಮಸ್ಯೆ ಪರಿಹಾರ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಅರಣ್ಯ ಇಲಾಖೆ ಸಹಕರಿಸದೇ ವಿಳಂಬ ನೀತಿ ತೋರುತ್ತಿದೆ.
ಈ ಹಿನ್ನೆಲೆಯಲ್ಲಿ ತಕ್ಷಣ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಕೇಂದ್ರ ಸರ್ಕಾರದ ಕುಸುಮ್-ಸಿ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಸಂಸದ ಕೋಟ ತಿಳಿಸಿದ್ದಾರೆ.
