ಲೋಕಬಂಧು ನ್ಯೂಸ್ | ಉಡುಪಿ, ಮೇ 16
ಕೊಡವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿರುವ ಮಹಾರುದ್ರ ಯಾಗ ಪ್ರಯುಕ್ತ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಬೆಳಿಗ್ಗೆಯಿಂದ ಆರಂಭಗೊಂಡವು.
ವೇ.ಮೂ. ಹಯವದನ ತಂತ್ರಿ ಪುತ್ತೂರು, ಮಧುಸೂದನ ತಂತ್ರಿ, ಸುಬ್ರಹ್ಮಣ್ಯ ಭಟ್ ಮತ್ತು ವಾದಿರಾಜ ತಂತ್ರಿ ನೇತೃತ್ವದಲ್ಲಿ ಬೆಳಿಗ್ಗೆ ಪುರೋಹಿತರಿಂದ ರುದ್ರ ಜಪಾನುಷ್ಠಾನ, ಮೃತ್ಯುಂಜಯ ಯಾಗ ಆರಂಭಗೊಂಡವು.
ಬಳಿಕ ಶ್ರೀ ಶಂಕರನಾರಾಯಣ ದೇವರಿಗೆ ಕಲಶಾಧಿವಾಸ, ಅಧಿವಾಸ ಹೋಮ, ಪರಿವಾರ ಕಲಶ ಸಹಿತ ವಿವಿಧ ಹೋಮ- ಹವನಗಳು ನೆರವೇರಿದವು.
ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಕೊಡವೂರು ಶಂಕರನಾರಾಯಣ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಮಹಾರುದ್ರ ಯಾಗ ಸಮಿತಿ ಪ್ರಧಾನ ಸಂಚಾಲಕ ತಾರಾನಾಥ ಪೂಜಾರಿ, ಸಂಚಾಲಕರಾದ ನಂದಕಿಶೋರ್ ಕೆಮ್ಮಣ್ಣು ಮತ್ತು ರಮೇಶ್ ತಿಂಗಳಾಯ ಮೊದಲಾದವರಿದ್ದರು.
