ಲೋಕಬಂಧು ನ್ಯೂಸ್ | ಉಡುಪಿ, ಮೇ 12
ದೇಶದಲ್ಲಿ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ತಡೆಯಲು ಪ್ರಯತ್ನಿಸದೇ ನಿರುದ್ಯೋಗ ನಿವಾರಣೆಗೆ ಯೋಜನೆ ರೂಪಿಸದೆ ಸರಕಾರಿ ಸಂಸ್ಥೆಗಳನ್ನು ಮಾರಾಟ ಮಾಡಿಯೂ ದೇಶದ ದಿವಾಳಿಯಾಗುವುದನ್ನು ತಡೆಯಲು ಕೇಂದ್ರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಮುಚ್ಚಿಡಲು ಪ್ರಧಾನಿ ಮೋದಿ ಜನತೆಯಲ್ಲಿ ಎಂಟು ಬೇಡಿಕೆಗಳನ್ನು ಮಂಡಿಸಿರುವುದು ಮುಂದಿನ ದಿನಗಳು ಕಳವಳಕಾರಿ ಎಂಬುದರ ಸೂಚನೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ತಿಳಿಸಿದ್ದಾರೆ.
ಚಿನ್ನ ಖರೀದಿಸಬೇಡಿ, ವಿದೇಶ ಪ್ರಯಾಣ ತಪ್ಪಿಸಿ, ಪೆಟ್ರೋಲ್ ಕಡಿಮೆ ಬಳಸಿ ಎಂಬಿತ್ಯಾದಿ ಪ್ರಧಾನಿಯ ತ್ಯಾಗದ ಹೇಳಿಕೆಗಳು ಸರಕಾರದ ವೈಫಲ್ಯವನ್ನು ಬಿಂಬಿಸುತ್ತವೆ. ಜನತೆಗೆ ಕರೆ ನೀಡುವ ಮೊದಲು ಪ್ರಧಾನಿ ತನ್ನ ವಿದೇಶ ಪ್ರಯಾಣವನ್ನು ಕಡಿತ ಮಾಡಿದ್ದಾರೆಯೇ? ಅನವಶ್ಯಕ ಭದ್ರತಾ ಸಿಬ್ಬಂದಿಗಳನ್ನು ಕಡಿತಗೊಳಿಸಿ, ಸಂಸದರ ಭತ್ತೆಯನ್ನು ಕಡಿತಗೊಳಿಸಲಿ. ರಾಜಕೀಯವನ್ನು ಸೇವೆ ಎಂದು ಪರಿಗಣಿಸಿ
ದೇಶದ ಖಜಾನೆ ಸೋರುವಿಕೆಯನ್ನು ತಡೆಯಲಿ ಎಂದು ಸಲಹೆ ನೀಡಿದ್ದಾರೆ.
ದೇಶ ಆರ್ಥಿಕ ಸಂಕಷ್ಟದಲ್ಲಿದೆ, ಜನರೇ ಊಟ ಮಾಡುವುದನ್ನು ನಿಲ್ಲಿಸಿ ಎನ್ನುವ ಕಾಲ ಬರಬಹುದೇ ಎಂದು ಆತಂಕ ವ್ಯಕ್ರಪಡಿಸಿರುವ ಭಾಸ್ಕರ ರಾವ್, ಕಳೆದ 12 ವರ್ಷದ ಆಡಳಿತದಿಂದ ದೇಶವನ್ನು ಇಂಥ ಸ್ಥಿತಿಗೆ ಬಿಜೆಪಿ ತಂದಿದೆ. ಜನರು ಏನನ್ನು ಖರೀದಿಸಬೇಕು, ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎನ್ನುವ ಸರಕಾರದ ಆದೇಶಕ್ಕಾಗಿ ಕಾಯಬೇಕಾಗಬಹುದೇ?
ದೇಶ 217 ಲಕ್ಷ ಕೋಟಿ ಸಾಲದಲ್ಲಿ ಮುಳುಗಿರುವಾಗ ದೇಶ ಸಂಕಷ್ಟದಲ್ಲಿದೆ ಎಂದು ಬಿಂಬಿಸುತ್ತಿರುವಾಗ ಕೇಂದ್ರ ಸರಕಾರ ಪ್ರಸ್ತುತ ಲೋಕಸಭೆಯ 543 ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಯಾರ ಹಿತಕ್ಕಾಗಿ? ಲೋಕಸಭಾ ಸದಸ್ಯರ ಹೆಚ್ಚಳ ದೇಶಕ್ಕೆ ಇನ್ನಷ್ಟು ಆರ್ಥಿಕ ಹೊರೆ ಎನ್ನುವುದು ಗೊತ್ತಿದ್ದರೂ ಈ ಸದಸ್ಯರ ಸಂಖ್ಯೆ ಹೆಚ್ಚಳದಿಂದ ಯಾರಿಗೆ ಲಾಭ? ದೇಶದ 145 ಕೋಟಿ ಜನಸಾಮಾನ್ಯರ ಮೂಲಸೌಕರ್ಯ ಸುಧಾರಣೆಗೆ ಎಷ್ಟು ಸಂಸದರು ಕಾಳಜಿ ವ್ಯಕ್ತಪಡಿಸಿದ್ದಾರೆ? ಈಗಾಗಲೇ 543 ಲೋಕಸಭಾ ಸದಸ್ಯರ ಭಾರ ತಾಳಲಾರದೆ ದೇಶ ನಲುಗಿ ಹೋಗಿದೆ. ಇನ್ನಷ್ಟು ಸದಸ್ಯರ ಸಂಖ್ಯೆ ಹೆಚ್ಚಳ ಯಾವ ಸಾಧನೆಗಾಗಿ ಎಂದು ಪ್ರಧಾನಿ ಜನತೆಗೆ ಉತ್ತರಿಸಬೇಕಾಗಿದೆ.
ಪ್ರತೀ ಬಾರಿಯೂ ಜವಾಬ್ದಾರಿಯನ್ನು ಜನರ ಮೇಲೆ ಹಾಕಿ ತಾನು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಕೇಂದ್ರ ಸರಕಾರದ ವೈಫಲ್ಯ ಎನ್ನಬೇಕು ಎಂದು ಭಾಸ್ಕರ ರಾವ್ ಕಿದಿಯೂರು ಅವರು ಪ್ರಧಾನಿ ಉಪದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ.
