ದೇಹ ಬುದ್ಧಿಯ ಸಮತೋಲನದಿಂದ ಬದುಕು ಸುಂದರ

ಲೋಕಬಂಧು ನ್ಯೂಸ್ | ಉಡುಪಿ, ಮೇ 24
ದೇಹ, ಬುದ್ಧಿಯ ಸಮತೋಲನದಿಂದ ಬದುಕು ಸುಂದರವಾಗುತ್ತದೆ ಎಂದು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಮಲ್ಪೆ ಕಡಲ ತೀರದ ಶ್ರೀ ಆನಂದ ಶರಧಿಯಲ್ಲಿ ಭಾನುವಾರ ಆಯೋಜಿಸಿದ ಗ್ರಾಮೀಣ ಕ್ರೀಡಾ ಸ್ಪರ್ಧೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸದ್ವಿಚಾರಗಳ ಅಧ್ಯಯನದಿಂದ ಮನಸ್ಸು ಅಥವಾ ಬುದ್ದಿಗೆ ಆಹ್ಲಾದವಾಗುತ್ತದೆ. ಕ್ರೀಡೆಯಿಂದ ಶರೀರಕ್ಕೆ ಆಹ್ಲಾದ ಲಭಿಸುತ್ತದೆ. ಕೇವಲ ದೇಹ ದಂಡನೆ ಅಥವಾ ಮನಸ್ಸಿಗೆ ಕೆಲಸ ಕೊಡುವುದು ಸಲ್ಲದು. ದೇಹ - ಮನಸ್ಸುಗಳೆರಡನ್ನೂ ಸಮತೂಕದಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೊಬೈಲ್'ಗಳಲ್ಲೇ ಹೆಚ್ಚಾಗಿ ಕಾಲ ಕಳೆಯುತ್ತಿರುವ ಈ ದಿನಗಳಲ್ಲಿ ಕ್ರೀಡೆಗಳಿಗೆ ಅದರಲ್ಲೂ ಗ್ರಾಮೀಣ ಕ್ರೀಡೆಗಳಿಂದ ದೇಹ ಸ್ವಾಸ್ಥ್ಯ ಸಾಧ್ಯ. ಜೊತೆಗೆ ಮನಸ್ಸನ್ನೂ ಪ್ರಫುಲ್ಲವಾಗಿಟ್ಟುಕೊಳ್ಳಲು ಸಹಕಾರಿ. ಕಣ್ಮರೆಯಾಗಿರುವ ಅನೇಕ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುತ್ತಿರುವುದು ಸ್ತುತ್ಯರ್ಹ ಎಂದರು.


ವಿದ್ವಾಂಸ ಡಾ.ದೇರೆಬೈಲು ಶಿವಪ್ರಸಾದ ತಂತ್ರಿ, ಗೃಹರಕ್ಷಕ ದಳದ ಸಮಾದೇಷ್ಟ ಡಾ. ರೋಶನ್ ಶೆಟ್ಟಿ, ಪೂರ್ಣಪ್ರಜ್ಞ ಕಾಲೇಜು ಪ್ರಾಚಾರ್ಯ ಸಂದೀಪ್ ಕುಮಾರ್, ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಸಮಾಜ ಸೇವಕ ನಿತ್ಯಾನಂದ ಒಳಕಾಡು, ಪ್ರಮುಖರಾದ ಯೋಗೀಶ್ ಸಾಲ್ಯಾನ್, ದಯೇಶ್, ದಶಾ ಮಹಾಬಲ, ವಿಶಾಲ್ ಮೊದಲಾದವರಿದ್ದರು.


ಆನಂದ ಶರಧಿ ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿಗಳಾದ ಗೋವಿಂದರಾಜ್ ಸ್ವಾಗತಿಸಿ, ವಿಜಯ ಕೊಡವೂರು ನಿರೂಪಿಸಿದರು. ವೈಭವ್ ಕೊಡವೂರು ವಂದಿಸಿದರು.
ಬಳಿಕ ಗ್ರಾಮೀಣ ಕ್ರೀಡಾ ಸ್ಪರ್ಧೆ ನಡೆಯಿತು.