ಲೋಕಬಂಧು ನ್ಯೂಸ್ | ಬ್ರಹ್ಮಾವರ, ಮೇ 26
ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬ್ರಹ್ಮಾವರ ತಾಲೂಕು ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ದಾಳಿ ನಡೆಸಿ ವಿವಿಧ ಶಾಖೆಗಳ ಕಡತಗಳನ್ನು ಪರಿಶೀಲಿಸಿದರುಬೆಂಗಳೂರು ಲೋಕಾಯುಕ್ತ ಕಚೇರಿಯಿಂದ ಶೋಧನಾ ವಾರಂಟ್ ಪಡೆದು ನಡೆಸಿದ ಈ ಕಾರ್ಯಾಚರಣೆ ಮಂಗಳೂರು ಲೋಕಾಯುಕ್ತ ಎಸ್.ಪಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ನಡೆಯಿತು.
ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್, ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಮಂಜುನಾಥ್ ಹಾಗೂ ರಾಜೇಂದ್ರ ನಾಯ್ಕ್, ಮಂಗಳೂರು ಲೋಕಾಯುಕ್ತ ಇನ್ಸ್ಪೆಕ್ಟರ್ ಭಾರತಿ ಸೇರಿದಂತೆ ಉಡುಪಿ ಮತ್ತು ಮಂಗಳೂರು ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.
ತಹಶೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ವಿಲೇವಾರಿಗೆ ಬಾಕಿ ಉಳಿದಿದ್ದ ಕಡತಗಳು ಹಾಗೂ ನಿಯಮ ಬಾಹಿರವಾಗಿ ವಿಲೇವಾರಿ ಮಾಡಲಾಗಿದೆ ಎನ್ನಲಾದ ದಾಖಲೆಗಳನ್ನು ಪರಿಶೀಲಿಸಿ ಕೆಲವು ಪ್ರಮುಖ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಪರಿಶೀಲನೆ ವೇಳೆ ಪತ್ತೆಯಾದ ಅಂಶಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಲೋಕಾಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
