ಮಟ್ಟು ಗುಳ್ಳ ಮಾದರಿ ಧ್ವಂಸ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಲೋಕಬಂಧು ನ್ಯೂಸ್ | ಕಾಪು, ಮೇ 23
ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಆಕರ್ಷಕ ಮಾದರಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿರುವ ಮಟ್ಟು ಗುಳ್ಳ ಬೆಳೆಗಾರರ ಸಂಘ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ‌ ಕೈಗೊಳ್ಳುವಂತೆ ಸಂಘದ ಅಧ್ಯಕ್ಷ ಸುನಿಲ್ ಡಿ. ಬಂಗೇರ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶ್ವಪ್ರಸಿದ್ಧ 'ಮಟ್ಟು ಗುಳ್ಳ' ಕೇವಲ ಒಂದು ಬೆಳೆ ಅಥವಾ ತರಕಾರಿ ಮಾತ್ರವಲ್ಲದೆ, ಮಟ್ಟು ಗ್ರಾಮದ ಹೆಮ್ಮೆ. ಕರಾವಳಿಯ ಸಂಸ್ಕೃತಿ, ರೈತರ ಪರಿಶ್ರಮ ಹಾಗೂ ಸೋದೆ ಶ್ರೀ ವಾದಿರಾಜ ಸ್ವಾಮೀಜಿಯವರ ಪವಿತ್ರ ಪ್ರಸಾದದ ನೆನಪನ್ನು ಹೊತ್ತ ಅಮೂಲ್ಯ ಪರಂಪರೆ.
ದೇಶ–ವಿದೇಶಗಳಲ್ಲಿಯೂ ವಿಶೇಷ ಗುರುತನ್ನು ಪಡೆದಿರುವ ಮಟ್ಟು ಗುಳ್ಳ ಇಂದು ಉಡುಪಿ ಜಿಲ್ಲೆಯ ಗೌರವದ ಪ್ರತೀಕವಾಗಿ ಗುರುತಿಸಿಕೊಂಡಿದೆ. ಈ ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಮೇಲಿನ ಅಭಿಮಾನ ಹಾಗೂ ಪ್ರೀತಿಯಿಂದ ದಾನಿ ಸುಭಾಷ್ ಎಂ. ಸಾಲಿಯನ್ ನೆಲ್ಲಿಕಟ್ಟೆ ಅವರು I LOVE MATTU ವಿನ್ಯಾಸದೊಂದಿಗೆ ಮಟ್ಟು ಗುಳ್ಳದ ಆಕರ್ಷಕ ಮಾದರಿಯನ್ನು ನಿರ್ಮಿಸಿ ಗ್ರಾಮಕ್ಕೆ ಸಮರ್ಪಿಸಿದ್ದರು. ಅದು ಪ್ರವಾಸಿಗರು ಹಾಗೂ ಯುವಜನತೆಗೆ ಮಟ್ಟು ಗ್ರಾಮದ ಗುರುತಾಗಿ ಪರಿಣಮಿಸಿತ್ತು.
ಇತ್ತೀಚೆಗೆ ಕೆಲವು ದುಷ್ಕರ್ಮಿಗಳು ರಾತ್ರಿ ವೇಳೆ ಆ ಮಾದರಿಯನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿದ್ದು, ಅದು ಕೇವಲ ಒಂದು ಮಾದರಿಯ ಮೇಲಿನ ಹಾನಿಯಲ್ಲ,  ಮಟ್ಟು ಗ್ರಾಮದ ಗೌರವ, ರೈತರ ಭಾವನೆ ಮತ್ತು ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಅಸ್ತಿತ್ವದ ಮೇಲಿನ ಅವಮಾನಕರ ಕೃತ್ಯವಾಗಿದೆ ಎಂದು ಸಂಘ ಆಕ್ರೋಶ ವ್ಯಕ್ತಪಡಿಸಿದೆ ಎಂದು ಸುನಿಲ್ ಡಿ. ಬಂಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಹೇಯ ಕೃತ್ಯವನ್ನು ಮಟ್ಟು ಗುಳ್ಳ ಬೆಳೆಗಾರರ ಸಂಘ ತೀವ್ರವಾಗಿ ಖಂಡಿಸಿದ್ದು, ಗ್ರಾಮಸ್ಥರು ಮತ್ತು ರೈತರ ಮನಸ್ಸಿಗೆ ಘಾಸಿಯುಂಟು ಮಾಡಿರುವ ತಪ್ಪಿತಸ್ಥರನ್ನು ತಕ್ಷಣ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.