ಶಾಸಕರಾಗಿ ಜೀವರಾಜ್: ಪ್ರಮಾಣಪತ್ರ ಹಸ್ತಾಂತರ

ಲೋಕಬಂಧು ನ್ಯೂಸ್, ಚಿಕ್ಕಮಗಳೂರು, ಮೇ 4
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರ 255 ಮತಗಳು ಅಸಿಂಧುಗೊಂಡಿದ್ದು, ಈ ಹಿಂದೆ ಪರಾಭವಗೊಂಡಿದ್ದ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಗೆಲುವು ಸಾಧಿಸಿದ್ದಾರೆ. ಜೀವರಾಜ್‌ 52 ಮತಗಳ ಮುನ್ನಡೆ ಸಾಧಿಸಿ ಶಾಸಕರಾಗಿ ಸೋಮವಾರ ಪ್ರಮಾಣಪತ್ರ ಸ್ವೀಕರಿಸಿದರು.ತೀವ್ರ ಕುತೂಹಲ, ಗೊಂದಲ, ನಾಟಕೀಯ ಬೆಳವಣಿಗೆಗಳ ನಡುವೆ ಹೈಕೋರ್ಟ್ ಆದೇಶದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಶನಿವಾರ ತಡರಾತ್ರಿ ವೇಳೆಗೆ ಮುಕ್ತಾಯಗೊಂಡಿತ್ತು. 2023ರಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಪಡೆದ ಮತಗಳ ಪೈಕಿ ಬರೋಬ್ಬರಿ 255 ಮತಗಳು ಅಸಿಂಧು ಎಂದು ವರಿಗಣಿಸಲಾಗಿದೆ. ಹಾಗಾಗಿ, ಬಿಜೆಪಿ ಅಭ್ಯರ್ಥಿ ಡಿ.ಎನ್‌.ಜೀವರಾಜ್ ಇದೀಗ 52 ಮತಗಳ ಮುನ್ನಡೆ ಸಾಧಿಸಿದ್ದಾರೆ. ಡಿ.ಎನ್.ಜೀವರಾಜ್ ಅವರಿಗೆ ಚುನಾವಣಾಧಿಕಾರಿ ಪ್ರಮಾಣಪತ್ರ ಹಸ್ತಾಂತರಿಸಿದರು.


2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಬಿಜೆಪಿಯ ಡಿ.ಎನ್.ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಲ್ಪ ಅಂತರದಿಂದ ಜಯ ಗಳಿಸಿದ್ದರು. ಅಂದು ರಾಜೇಗೌಡ ಇವಿಎಂ ಮತಗಳ ಎಣಿಕೆ ವೇಳೆ 324 ಮತಗಳ ಮುನ್ನಡೆ ಸಾಧಿಸಿದ್ದರು.