ಶಾಸಕ ಜೀವರಾಜ್ ಪ್ರಮಾಣವಚನ ಸ್ವೀಕಾರ

ಲೋಕಬಂಧು ನ್ಯೂಸ್ ಬೆಂಗಳೂರು, ಮೇ 6
ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ತೀವ್ರ ರಾಜಕೀಯ ಹೋರಾಟದ ಬಳಿಕ ಶಾಸಕರಾಗಿ ಘೋಷಿಸಲ್ಪಟ್ಟ ಬಿಜೆಪಿ ನಾಯಕ ಡಿ.ಎನ್. ಜೀವರಾಜ್ ಬುಧವಾರ ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ವಿಧಾನಸೌಧದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಿದರು.


ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಮುನಿರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಶೃಂಗೇರಿ ಶಾರದಾಂಬೆ ಹಾಗೂ ಭಗವಂತನ ಹೆಸರಿನಲ್ಲಿ ಜೀವರಾಜ್ ಪ್ರಮಾಣವಚನ ಸ್ವೀಕರಿಸಿದ್ದು, ಬಳಿಕ ಸ್ಪೀಕರ್ ಖಾದರ್ ಅವರು ಅಭಿನಂದಿಸಿ ವಿಧಾನಸಭಾ ನಡಾವಳಿಗಳ ಪುಸ್ತಕ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಆರ್. ಅಶೋಕ್ ಅವರು ಹಾರ ಹಾಗೂ ಪೇಟ ಹಾಕಿ ಜೀವರಾಜ್ ಅವರನ್ನು ಸನ್ಮಾನಿಸಿದರು.


ಈಮಧ್ಯೆ ಪ್ರಮಾಣವಚನ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸಂವಿಧಾನದ ಪ್ರಕಾರ ಸ್ಪೀಕರ್ ಪ್ರಮಾಣವಚನ ಬೋಧಿಸದಿದ್ದರೆ ರಾಜ್ಯಪಾಲರನ್ನು ಸಂಪರ್ಕಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅಗತ್ಯಬಿದ್ದರೆ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದರು.