ಕೆಡಿಪಿ ಸಭೆಯಲ್ಲಿ ಪಾಲಿಸದ ಶಿಷ್ಟಾಚಾರ: ಜಿಲ್ಲಾಡಳಿತ ವಿರುದ್ಧ ಶಾಸಕರ ಆರೋಪ

ಲೋಕಬಂಧು ನ್ಯೂಸ್ | ಉಡುಪಿ, ಮೇ 16
ಉಡುಪಿ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ ಎಂದು ಜಿಲ್ಲೆಯ ಬಿಜೆಪಿ ಶಾಸಕರು ಆರೋಪಿಸಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.
ಶಾಸಕರಾದ ಸುನಿಲ್ ಕುಮಾರ್, ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಹಕ್ಕುಪತ್ರ ವಿತರಣೆಯಂಥ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳಾದ ಶಾಸಕರನ್ನು ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ ಎಂದು ಸುನಿಲ್ ಕುಮಾರ್ ಆರೋಪಿಸಿದರು. ತಮ್ಮ ಕ್ಷೇತ್ರದ ಹಕ್ಕುಪತ್ರವನ್ನು ಬೇರೆ ಯಾರೋ ವಿತರಣೆ ಮಾಡುತ್ತಿದ್ದಾರೆ ಎಂದು ಫೋಟೋ ಪ್ರದರ್ಶಿಸಿದರು.


ಇದೇ ವೇಳೆ, ರಂಗಾಯಣ ಪ್ರಕಟಿಸಿದ ಪುಸ್ತಕದಲ್ಲಿ ಉಸ್ತುವಾರಿ ಸಚಿವೆ ಮತ್ತು ಸಂಸದರ ಭಾವಚಿತ್ರವನ್ನು ಪ್ರಕಟಿಸದೇ ಶಿಷ್ಟಾಚಾರ ಲೋಪ ಎಸಗಲಾಗಿದೆ ಎಂಬ ವಿಷಯವೂ ಸಭೆಯಲ್ಲಿ ಪ್ರಸ್ತಾಪವಾಯಿತು.


ಅಧಿಕಾರಿಗಳ ನಡೆಗೆ ಅಸಮಾಧಾನಗೊಂಡ ಸಚಿವೆ ಹೆಬ್ಬಾಳ್ಕರ್ ಗರಂ ಆಗಿ, ಕಾರ್ಕಳ ತಹಶೀಲ್ದಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸುವಂತೆ ಸೂಚನೆ ನೀಡಿದರು.


ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.,ಜಿ.ಪಂ.‌ ಸಿಇಓ ಪ್ರತೀಕ್ ಬಾಯಲ್ ಮೊದಲಾದವರಿದ್ದರು.