ಮೋದಿ ಹೇಳಿಕೆ ಬಾಲಿಶತನದ್ದು

ಲೋಕಬಂಧು ನ್ಯೂಸ್ | ಉಡುಪಿ, ಮೇ 12
ದೇಶದ ಜನತೆ ಒಂದು ವರ್ಷ ಕಾಲ ವಿದೇಶ ಪ್ರವಾಸ ಮಾಡಬೇಡಿ, ಪೆಟ್ರೋಲ್- ಡೀಸೆಲ್ ಮಿತವಾಗಿ ಬಳಸಿ, ಚಿನ್ನ ಖರೀದಿಸಬೇಡಿ ಎಂದು ಹೇಳುವ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೇ 15ರಿಂದ ಐದು ದೇಶಗಳ ವಿದೇಶ ಪ್ರವಾಸ ಕೈಗೊಂಡಿರುವುದು ಹಾಸ್ಯಾಸ್ಪದ. ಅವರು ನೀಡಿದ ಹೇಳಿಕೆ ನಿಜಕ್ಕೂ ಬಾಲಿಶತನದ್ದಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ವ್ಯಂಗವಾಡಿದ್ದಾರೆ.
ತಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶ ಪ್ರತಿಯೊಂದು ವಿಚಾರದಲ್ಲೂ ಸ್ವಾವಲಂಬನೆ ಸಾಧಿಸಿದ್ದು ಹಿಂದಿನ ಸರಕಾರಗಳು ದೇಶಕ್ಕೆ ಏನೂ ಕೊಡುಗೆ ನೀಡಿಲ್ಲ ಎಂದು ಹೇಳುವ ಪ್ರಧಾನಿ ಮೋದಿ, ಯುದ್ದದ ನೆಪವಿಟ್ಟು ಜನರು ಪೆಟ್ರೋಲ್ ಡಿಸೇಲ್, ಗ್ಯಾಸ್ ಮಿತವಾಗಿ ಬಳಸಿ ಎನ್ನುತ್ತಿರುವುದು ಅವರ ವೈಫಲ್ಯಗಳಿಗೆ ಹಿಡಿದ ಕೈಗನ್ನಡಿ. ದೇಶದ ಜನತೆಗೆ ಉಪದೇಶ ಮಾಡುವ ಪ್ರಧಾನಿ ಮೋದಿ ಮೊದಲು ತಾವು ಅದರಂತೆಯೇ ಬದುಕುವ ಕೆಲಸ ಮಾಡಬೇಕಲ್ಲವೆ ಎಂದು‌ ಕಾಂಚನ್ ಪ್ರಶ್ನಿಸಿದ್ದಾರೆ.


ರೋಡ್ ಶೋ ಮೂಲಕ ಸಾವಿರಾರು ವಾಹನಗಳನ್ನು ಉಪಯೋಗಿಸಿ ಪೆಟ್ರೋಲ್, ಡಿಸೇಲ್ ವೆಚ್ಚ ಮಾಡುತ್ತಿರುವುದು ದೇಶದ ಪ್ರಧಾನಿ ಎನ್ನುವುದನ್ನು ಮೋದಿ ಮರೆತಿದ್ದಾರೆ. ಸಮಸ್ಯೆಗಳು ಎದುರಾದಾಗ ಅದರಿಂದ ತಪ್ಪಿಸಿಕೊಳ್ಳಲು ವರ್ಷದಲ್ಲಿ ಹತ್ತು ಬಾರಿಯಾದರೂ ವಿದೇಶ ಪ್ರವಾಸ ಕೈಗೊಳ್ಳುವುದು ಕೂಡಾ ನರೇಂದ್ರ ಮೋದಿಯವರೇ. ಕಳೆದ 12 ವರ್ಷಗಳಲ್ಲಿ ದೇಶವನ್ನು ಯಾವ ಸ್ಥಿತಿಗೆ ತರಲಾಗಿದೆ ಎಂದರೆ ಜನರು ಏನು ಖರೀದಿಸಬೇಕು, ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು ಮತ್ತು ಎಲ್ಲಿಗೆ ಹೋಗಬಾರದು ಎಂಬುದನ್ನು ಹೇಳುವ ಮಟ್ಟಕ್ಕೆ ಕೆಟ್ಟ ಪರಿಸ್ಥಿತಿ ಬಂದಿದೆ.


ಈ ಹಿಂದೆ ಮಹಾಮಾರಿ ಕೊರೊನಾ ಬಂದಾಗ ತಟ್ಟೆ ಬಡಿಯಲು, ಮೊಬೈಲ್ ಟಾರ್ಚ್ ಬಳಸಲು ಹೇಳಿದ ಪ್ರಧಾನಿ ಮೋದಿ ಮತ್ತೆ ಜನರಿಗೆ ತ್ಯಾಗ ಮಾಡುವಂತೆ ಕರೆ ನೀಡಿದ್ದಾರೆ. ಚಿನ್ನ ಖರೀದಿಸಬೇಡಿ, ವಿದೇಶಗಳಿಗೆ ಪ್ರಯಾಣಿಸಬೇಡಿ, ಪೆಟ್ರೋಲ್ ಕಡಿಮೆ ಬಳಸಿ, ರಸಗೊಬ್ಬರ ಹಾಗೂ ಖಾದ್ಯ ತೈಲ ಬಳಕೆಯನ್ನು ತಗ್ಗಿಸಿ, ಮೆಟ್ರೊದಲ್ಲಿ ಸಂಚರಿಸಿ ಮತ್ತು ಮನೆಯಿಂದಲೇ ಕೆಲಸ ಮಾಡಿ ಎಂದು ಸೂಚಿಸಿದ್ದಾರೆ.


ಪ್ರಧಾನಿ ಮೋದಿಯವರಿಗೆ ದೇಶವನ್ನು ಮುನ್ನಡೆಸುವ ತಾಕತ್ತು ಇಲ್ಲ ಎನ್ನುವುದನ್ನು ತೋರಿಸಲು ಅವರ ಇಂಥ ಮಾತುಗಳೇ ಅವರ ವೈಫಲ್ಯಕ್ಕೆ ಸಾಕ್ಷಿ.


ಕರ್ನಾಟಕಕ್ಕೆ ಬಂದು ಇಂಥ ಬಾಲಿಶ ಮಾತುಗಳೊಂದಿಗೆ ರಾಜ್ಯದ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳನ್ನೂ ಟೀಕಿಸಿರುವ ಪ್ರಧಾನಿ, ಎರಡು ದಿನಗಳ ಹಿಂದೆ ಅಧಿಕಾರದ ಚುಕ್ಕಾಣಿ ಹಿಡಿದ ಪಶ್ಚಿಮ ಬಂಗಾಳದಲ್ಲಿ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಘೋಷಣೆ ಮಾಡಿದ್ದು ಯಾಕೆ? ಅದರ ಬಗ್ಗೆ ರಾಜ್ಯ ಬಿಜೆಪಿ ನಾಯಕರ ಉತ್ತರವೇನು?


ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯತೈಲ ಎಲ್ಲವೂ ದುಬಾರಿಯಾಗಿ ದೇಶದ ಜನರ ನಿತ್ಯದ ಜೀವನ ನಿರ್ವಹಣೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣಕ್ಕೆ ದೇಶದ ಎಡಬಿಡಂಗಿ ವಿದೇಶಾಂಗ ನೀತಿ ಕಾರಣ ಎನ್ನುವುದನ್ನು ದೇಶದ ಜನತೆಗೆ ಅರಿವಾಗಿದೆ. ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಯುದ್ಧದ ನಡುವೆ ಭಾರತ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದೆ. ಅದಕ್ಕೆ ಸೂಕ್ತ ಪರಿಹಾರ ನೀಡಬೇಕಾದ ಪ್ರಧಾನಿ ಮೋದಿ ಉಪದೇಶ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.


ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿ ಸಂಸದರು ಹಾಗೂ ಬಿಜೆಪಿ ಶಾಸಕರಿಗೆ ಸವರ ಈ ಕೆಟ್ಟ ಆಡಳಿತವನ್ನು ಪ್ರಶ್ನಿಸುವ ಧೈರ್ಯ ಇಲ್ಲವೇ ಪ್ರತಿಯೊಂದು ವೈಫಲ್ಯಕ್ಕೆ ನೆಹರೂ, ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಪಕ್ಷವನ್ನು ದೂರುವ ದೇಶದ ಪ್ರಧಾನಿ ಹಾಗೂ ಬಿಜೆಪಿಯವರು ಚಿನ್ನ ಖರೀದಿಸಬೇಡಿ, ವಿದೇಶಗಳಿಗೆ ಪ್ರಯಾಣಿಸಬೇಡಿ, ಪೆಟ್ರೋಲ್ ಕಡಿಮೆ ಬಳಸಿ, ರಸಗೊಬ್ಬರ ಹಾಗೂ ಖಾದ್ಯ ತೈಲ ಬಳಕೆ ತಗ್ಗಿಸಿ, ಮೆಟ್ರೊದಲ್ಲಿ ಸಂಚರಿಸಿ ಮತ್ತು ಮನೆಯಿಂದಲೇ ಕೆಲಸ ಮಾಡಿ ಎಂಬ ಪ್ರಧಾನಿ ಮೋದಿಯವರ ಬಿಟ್ಟಿ ಉಪದೇಶಕ್ಕೆ ಯಾರನ್ನು ದೂರುತ್ತೀರಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ.