ಅರಣ್ಯ ಭೂಮಿ ಒತ್ತುವರಿ ತೆರವಿಗೆ ಸೂಚನೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 25
ರಾಜ್ಯ ಸರ್ಕಾರ ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ತಳೆದಿದ್ದು, ಹೊಸ ಒತ್ತುವರಿಗೆ ಅವಕಾಶ ನೀಡಬಾರದು ಮತ್ತು 2015ರ ನಂತರದ ಎಲ್ಲಾ ಒತ್ತುವರಿ ತೆರವು ಮಾಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ‌. ಖಂಡ್ರೆ ಸೂಚಿಸಿದರು.
ಸೋಮವಾರ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 2015ಕ್ಕೆ ಮೊದಲು ರಾಜ್ಯದಲ್ಲಿ ಒಟ್ಟು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಲಾಗಿದೆ.


ಅದರಲ್ಲಿ ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿರುವ ಅಂದರೆ ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವ ಕುಟುಂಬಗಳಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವ ತನಕ ತೆರವು ಮಾಡದಂತೆ ನಿರ್ಣಯಿಸಲಾಗಿದೆ. 3 ಎಕರೆಗಿಂತ ಹೆಚ್ಚಿನ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.