ಲೋಕಬಂಧು ನ್ಯೂಸ್ | ಬೆಂಗಳೂರು, ಮೇ 23
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಪರ ಸಿವಿಲ್ ನ್ಯಾಯಾಲಯಗಳು ಹೊರಡಿಸಿರುವ ಪ್ರತಿಬಂಧಕಾದೇಶಗಳನ್ನು ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ನಂದೀಶ್ ಕುಮಾರ್ ಜೈನ್ ಮತ್ತು ಡಿ.ನಿಶ್ಚಲ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ರಜಾಕಾಲೀನ ಏಕಸದಸ್ಯ ಪೀಠ ಈ ಆದೇಶ ನೀಡಿತು.
ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಸಂಬಂಧಿತ ಪೊಲೀಸರು ಕಾನೂನಿನನ್ವಯ 17 ಮಾಧ್ಯಮ ಮತ್ತು ಯೂಟ್ಯೂಬ್ ಚಾನಲ್'ಗಳ ವಿರುದ್ಧ ಕಾನೂನಿನನ್ವಯ ಕ್ರಮ ಕೈಗೊಂಡು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಪ್ರತಿವಾದಿಗಳು ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ, ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ದುರುದ್ದೇಶಪೂರಿತ ಚರ್ಚೆ, ಮಾನಹಾನಿ ವರದಿ ಮಾಡದಂತೆ ನಿರ್ಬಂಧಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಅರ್ಜಿದಾರರ ಪರ ವಕೀಲ ಎಸ್.ರಾಜಶೇಖರ್, ಅರ್ಜಿದಾರರನ್ನು ಗುರಿಯಾಗಿಸಿಕೊಂಡು ಮಾನಹಾನಿಕರ ವಿಡಿಯೊಗಳು, ತಿರುಚಿದ ವಿಷಯ, ಸುಳ್ಳು ಆರೋಪಗಳು ಮತ್ತು ದಾರಿ ತಪ್ಪಿಸುವ ನಿರೂಪಣೆಗಳ ಪ್ರಸಾರ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು