ನಿಯಮ ಪಾಲಿಸಿದ ಸ್ಕ್ಯಾನಿಂಗ್ ಕೇಂದ್ರಗಳಿಗೆ ಮಾತ್ರ ಅನುಮತಿ ನೀಡಿ

ಲೋಕಬಂಧು ನ್ಯೂಸ್ | ಉಡುಪಿ, ಮೇ 12
ಸ್ಕ್ಯಾನಿಂಗ್ ಸೆಂಟರ್'ಗಳಿಗೆ ಅನುಮತಿ ನೀಡುವಾಗ ಸರಕಾರ ಜಾರಿಗೆ ತಂದಿರುವ ನಿಯಮಗಳನ್ನು ಪಾಲಿಸುವ ಸಂಸ್ಥೆಗಳಿಗೆ ಮಾತ್ರ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪಿ.ಸಿ.ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಕ್ಷಮ ಪ್ರಾಧಿಕಾರ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸರಕಾರ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ಹಾಗೂ ನಿಯಂತ್ರಣದ ಉದ್ದೇಶದಿಂದ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆ ಜಾರಿಗೆ ತಂದಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರಗಳನ್ನು ತೆರೆಯಲು ಅರ್ಜಿ ಸಲ್ಲಿಸಿದಾಗ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯ ಷರತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲನೆ ಮಾಡಿದ್ದಲ್ಲಿ ಮಾತ್ರ ಅನುಮತಿ ನೀಡುವಂತೆ ಸೂಚನೆ ನೀಡಿದರು.


ಸ್ಕ್ಯಾನಿಂಗ್ ಸೆಂಟರ್'ಗಳಲ್ಲಿ ಕಾಯ್ದೆಯನ್ವಯ ಕರ್ತವ್ಯ ನಿರ್ವಹಿಸುವ ರೇಡಿಯಾಲಜಿಸ್ಟ್ ವೈದ್ಯರ ವಿವರ, ಸರಕಾರದ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ನಿಯಮಾನುಸಾರ ಅಗತ್ಯ ರಿಜಿಸ್ಟರ್'ಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಸ್ಕ್ಯಾನಿಂಗ್ ಯಂತ್ರಗಳ ಬದಲಾವಣೆ ಅಥವಾ ಬೇರೆ ರೇಡಿಯಾಲಜಿಸ್ಟ್ ವೈದ್ಯರನ್ನು ಬದಲಾವಣೆ ಮಾಡುವಾಗ ಜಿಲ್ಲಾ ಮಟ್ಟದ ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯಬೇಕು. ಒಂದೊಮ್ಮೆ ಪಡೆಯದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.


ಗರ್ಭಧಾರಣೆ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ, ಹತ್ಯೆ ಕಾನೂನಿನಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಆ ಬಗ್ಗೆ ಜಿಲ್ಲಾ ಮಟ್ಟದ ಸಮಿತಿಗಳು ಎಚ್ಚರ ವಹಿಸಬೇಕು. ಒಂದೊಮ್ಮೆ ಕಾಯ್ದೆಯನ್ನು ಉಲ್ಲಂಘಿಸಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.


ರೋಗಿಗಳು ತಪಾಸಣೆಗಾಗಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ಬಂದ ಸಂದರ್ಭದಲ್ಲಿ ವೈದ್ಯರ ಆಯ್ಕೆಗೆ ಅನುಕೂಲ ಮಾಡಿಕೊಡುವ ಜೊತೆಗೆ ಗಂಟೆಗಟ್ಟಲೆ ಕಾಯಿಸದೇ ತಪಾಸಣೆಯನ್ನು  ಅಲ್ಪಕಾಲದಲ್ಲಿಯೇ ಪಡೆಯುವಂತಾಗಬೇಕು. ಪಿ.ಸಿ.ಪಿ.ಎನ್.ಡಿ.ಟಿ ಜಿಲ್ಲಾ ಪರಿಶೀಲನ ಮತ್ತು ತಪಾಸಣಾ ಸಮಿತಿ ಸದಸ್ಯರು ಮೂರು ತಿಂಗಳೊಳಗಾಗಿ ಜಿಲ್ಲೆಯ ಎಲ್ಲಾ ನೋಂದಾಯಿತ ಸ್ಕ್ಯಾನಿಂಗ್ ಸೆಂಟರ್'ಗಳ ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಭೇಟಿ ನೀಡುವುದರೊಂದಿಗೆ ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆ ಅನುಷ್ಠಾನದಲ್ಲಿ ಯಾವುದೇ ನ್ಯೂನತೆ ಕಂಡುಬಂದಲ್ಲಿ ಅಂಥ ಸ್ಕ್ಯಾನಿಂಗ್ ಸೆಂಟರ್ ಹಾಗೂ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.


ಜಿಲ್ಲೆಯಲ್ಲಿ 2025- 26ನೇ ಸಾಲಿನಲ್ಲಿ 1000 ಗಂಡು ಮಕ್ಕಳಿಗೆ 983 ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಲಿಂಗಾನುಪಾತ ಕಡಿಮೆ ಇರುವುದರಿಂದ ಆಗುವ ಸಾಮಾಜಿಕ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಬೇಕು ಎಂದರು.


ತಾಲೂಕು ಪ್ರಾಧಿಕೃತ ಅಧಿಕಾರಿಗಳ ಪರಿಶೀಲನ ಸಮಿತಿ 2025ರ ಸೆಪ್ಟೆಂಬರ್'ನಿಂದ 2026ರ ಏಪ್ರಿಲ್ ವರೆಗೆ ಉಡುಪಿಯ 120, ಕುಂದಾಪುರದ 94 ಹಾಗೂ ಕಾರ್ಕಳದ 120 ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಿ, ಅಗ್ನಿ ನಿರೋಧಕ ಸಾಧನ ಇಲ್ಲದಿರುವ ಬಗ್ಗೆ ಹಾಗೂ ಕೆ.ಪಿ.ಎಂ.ಇ ಕೆಲವು ನಿಯಮಾವಳಿಗಳನ್ನು ಪಾಲಿಸದಿರುವ ಕಾರಣ ಕ್ರಮವಾಗಿ 102, 248 ಹಾಗೂ 65 ಆರೋಗ್ಯ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ ಎಂದರು.


ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮ ರಾವ್ ಕೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ತಾಲೂಕು ವೈದ್ಯಾಧಿಕಾರಿಗಳು ಮೊದಲಾದವರಿದ್ದರು.