ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಲೋಕಬಂಧು ನ್ಯೂಸ್ | ನವದೆಹಲಿ, ಮೇ 25
ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‌ಗೆ ರೂ.2.61 ಹಾಗೂ ಡೀಸೆಲ್ ದರವನ್ನು 2.71 ರೂ. ಹೆಚ್ಚಿಸಲಾಗಿದ್ದು, ಕಳೆದ ಎರಡು ವಾರಗಳಲ್ಲಿ ಇದು ನಾಲ್ಕನೇ ಬಾರಿ ನಡೆದ ದರ ಏರಿಕೆಯಾಗಿದೆ.
ಮೇ 15ರಿಂದ ಆರಂಭವಾದ ಈ ಸರಣಿ ಏರಿಕೆಯಿಂದ ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸುಮಾರು ರೂ.7.5ರಷ್ಟು ಹೆಚ್ಚಳವಾಗಿರುವುದು ಸಾಮಾನ್ಯ ಜನರಲ್ಲಿ ಆತಂಕ ಮೂಡಿಸಿದೆ.


ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ, ಆಹಾರ ವಸ್ತುಗಳ ಬೆಲೆ, ಕೈಗಾರಿಕಾ ಉತ್ಪಾದನಾ ವೆಚ್ಚ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಲೆ ಏರಿಕೆಯ ಭೀತಿ ಎದುರಾಗಿದೆ.


ಹೊಸ ದರ ಪರಿಷ್ಕರಣೆಯ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ ರೂ.102.12ಕ್ಕೆ ಏರಿಕೆಯಾದರೆ, ಡೀಸೆಲ್ ರೂ.95.20ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ರೂ.111.21 ಹಾಗೂ ಡೀಸೆಲ್ ರೂ.97.83 ಆಗಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ ರೂ.113.51 ಮತ್ತು ಡೀಸೆಲ್ ರೂ.99.82 ದರಕ್ಕೆ ಮಾರಾಟವಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ.108.09 ಹಾಗೂ ಡೀಸೆಲ್ ರೂ.108.09 ಏರಿಕೆಯಾಗಿದೆ. ಅದೇ ರೀತಿ ಚೆನ್ನೈನಲ್ಲಿ ಪೆಟ್ರೋಲ್ ರೂ. 107.77 ಹಾಗೂ ಡೀಸೆಲ್ ರೂ.99.55ಕ್ಕೆ ಏರಿಕೆಯಾಗಿದೆ.


ರಾಜ್ಯ ಸರ್ಕಾರಗಳ ಸ್ಥಳೀಯ ತೆರಿಗೆಗಳು ಬೇರೆ ಬೇರೆ ಇರುವುದರಿಂದ ಪ್ರತೀ ರಾಜ್ಯದಲ್ಲೂ ದರಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.


ಮೇ 15ರಂದು ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಲಾ 3 ರೂ.ನಷ್ಟು ಹೆಚ್ಚಿಸಲಾಗಿತ್ತು. ಬಳಿಕ ಮೇ 19ರಂದು ಸುಮಾರು 90 ಪೈಸೆ ಏರಿಕೆ ಮಾಡಲಾಗಿತ್ತು. ಮೇ 23ರಂದು ಮತ್ತೆ ಪೆಟ್ರೋಲ್‌ಗೆ 87 ಪೈಸೆ ಮತ್ತು ಡೀಸೆಲ್‌ಗೆ 91 ಪೈಸೆ ಹೆಚ್ಚಳವಾಗಿತ್ತು.