ಲೋಕಬಂಧು ನ್ಯೂಸ್ | ಉಡುಪಿ, ಮೇ 16
ಪಂಚರಾಜ್ಯಗಳ ಚುನಾವಣೆ ವರೆಗೂ ಕಾದು ಬಳಿಕ ಪೆಟ್ರೋಲ್, ಡೀಸೆಲ್ ದರ ಏರಿಸಿರುವ ಕೇಂದ್ರ ಸರ್ಕಾರದ ಕ್ರಮ ಕಂಪ್ಲೀಟ್ ರಾಜಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಜನರಿಗೆ ಅದು ಮಾಡಬೇಡಿ, ಇದು ಮಾಡಬೇಡಿ ಎಂದು ಹೇಳುವುದಾಯ್ತು, ಅವರೇನು ಮಾಡಿದ್ದಾರೆ ಎಂದು ಹೇಳಲಿ ಎಂದು ಸಚಿವೆ ಹೆಬ್ಬಾಳ್ಕರ್ ತಾಕೀತು ಮಾಡಿದರು.
ಮೋದಿಯವರು ಗಂಟೆ ಬಾರಿಸಬೇಕು ಅಂದ್ರೆ ನಾವು ಗಂಟೆ ಬಾರಿಸುತ್ತೇವೆ. ಚಪ್ಪಾಳೆ ಹೊಡೀರಿ ಅಂದ್ರೆ ಹೊಡೀತೇವೆ. ಪೆಟ್ರೋಲ್, ಡೀಸೆಲ್ ಜಾಸ್ತಿ ಬಳಸಬೇಡಿ ಅಂದ್ರೆ ನಾವು ಪಾಲಿಸುತ್ತೇವೆ. ಬಂಗಾರ ಖರೀದಿಸಬೇಡಿ ಎಂದರೆ ಬಿಡುತ್ತೇವೆ. ದೇಶಕ್ಕಾಗಿ ಇತಿಮಿತಿಯನ್ನು ಪಾಲಿಸೋಣ. ಆದರೆ, ಇಂಥ ಪರಿಸ್ಥಿತಿಗೆ ಕಾರಣ ಯಾರು? ಅದು ಮಾಡಿ ಇದು ಮಾಡಿ ಅನ್ನೋದೇ ಆಯ್ತು. ಆದರೆ ಇವರೇನು ಮಾಡ್ತಿದಾರೆ, ಮುಂಜಾಗ್ರತಾ ಕ್ರಮವಾಗಿ ಏನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದೂ ಬೇಕಲ್ವಾ ಎಂದು ಪ್ರಶ್ನಿಸಿದರು.
ಮೋದಿ ಬಂಗಾರ ಖರೀದಿ ಮಾಡಬೇಡಿ ಎನ್ನುತ್ತಿದ್ದಾರೆ. ಏನೇನೋ ಹೇಳುತ್ತಾ ಬಂದಿದ್ದಾರೆ. ಆದರೆ, ಅಮೆರಿಕಾ ಯಾವ ರೀತಿ ನಮ್ಮ ಪ್ರಧಾನ ಮಂತ್ರಿಯನ್ನು ಕಂಟ್ರೋಲ್ ಮಾಡುತ್ತಿದೆ ಎಂಬುದನ್ನು ಮಾಧ್ಯಮದಲ್ಲೇ ನೋಡುತ್ತಿದ್ದೇವೆ. ಭಾರತದ ಬಗ್ಗೆ ಟ್ರಂಪ್ ಏನು ಹೇಳುತ್ತಿದ್ದಾರೆ ಗೊತ್ತಲ್ಲ ಎಂದು ವ್ಯಂಗ್ಯವಾಡಿದರು.
ಚುನಾವಣೆ ಮುಗಿದ ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಇದು ಕಂಪ್ಲೀಟ್ ರಾಜಕಾರಣ. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿಲ್ಲ. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಕಚ್ಚಾ ತೈಲ ಬೆಲೆ ಎಷ್ಟು ಏರಿತ್ತು ಗೊತ್ತಿದೆ. ಆದರೂ ಜನರಿಗೆ ಬರೆಹಾಕುವ ಕೆಲಸ ಮಾಡಿಲ್ಲ. ಈಗ ದಿಢೀರ್ ಲೀ.ಗೆ 3 ರೂ. ಬೆಲೆ ಏರಿಸಿ ಜನರ ಮೇಲೆ ಹೊರೆ ಹಾಕಿದ್ದಾರೆ ಎಂದರು.
ಹಿಜಾಬ್ ರಾಜಕಾರಣ ಬೇಡ
ಹಿಜಾಬ್ ವಿವಾದ ಕುರಿತ ಪ್ರಶ್ನೆಗೆ, ಶಿಕ್ಷಣದಲ್ಲಿ ರಾಜಕಾರಣ ಯಾವತ್ತೂ ಮಾಡಬಾರದು. ಮಕ್ಕಳು ಮುಗ್ಧರಿದ್ದಾರೆ. ಪಾಲಕರು ಕಲಿಯಲೆಂದು ಶಾಲೆಗೆ ಕಳಿಸುತ್ತಾರೆ. ಈ ವಿಚಾರದಲ್ಲಿ ಹೆಚ್ಚು ಚರ್ಚೆ ಮಾಡದೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ವಾತಾವರಣ ಸೃಷ್ಟಿ ಮಾಡಬೇಕೆಂದು ಮಾತ್ರ ಹೇಳುತ್ತೇನೆ.
ಅವರ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ಹಿಜಾಬ್ ಅಥವಾ ಇನ್ನಾವುದೇ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಮಕ್ಕಳ ಭವಿಷ್ಯ ತಲೆಯಲ್ಲಿಟ್ಡು ರಾಜಕಾರಣ ಮಾಡಬೇಕು ಎಂದಷ್ಟೇ ಹೇಳುತ್ತೇನೆ ಎಂದರು.
ಹೈಕಮಾಂಡ್ ತೀರ್ಮಾನ
ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಬಗೆಗಿನ ಪ್ರಶ್ನೆಗೆ, ಅದು ಎಲ್ಲವೂ ಪಕ್ಷದ ಹೈಕಮಾಂಡ್ ತೀರ್ಮಾನ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ನಾವೇನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮುಲಾಜಿಲ್ಲದೆ ಕ್ರಮ
ಬಾಗಲಕೋಟೆಯಲ್ಲಿ ಅಂಗನವಾಡಿಯಿಂದ ಹಣ ಸಂಗ್ರಹ ಮಾಡಲಾಗಿದೆ ಎಂಬ ಆರೋಪದ ಪ್ರಶ್ನೆಗೆ, ಯಾವುದೇ ಅಂಗನವಾಡಿಯಿಂದ ಹಣ ತಗೊಂಡಿಲ್ಲ. ಯಾರೇ ಆಗಲಿ ಹಾಗೇನಾದರೂ ಹಣ ಕಲೆಕ್ಷನ್ ಮಾಡಿದ್ದಲ್ಲಿ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವುದಾಗಿ ತಿಳಿಸಿದರು.
