ಬಾರ್ಕೂರು ಪ್ರವಾಸೋದ್ಯಮ ವೃದ್ಧಿಗೆ ಯೋಜನೆ

ಲೋಕಬಂಧು ನ್ಯೂಸ್ ಉಡುಪಿ, ಮೇ 6
ಐತಿಹಾಸಿಕ ಮಹತ್ವ ಹೊಂದಿರುವ ಬಾರ್ಕೂರನ್ನು ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಸಮಗ್ರ ಅಭಿವೃದ್ಧಿ ಮಾಡುವಂತೆ ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಬಾರ್ಕೂರಿನಲ್ಲಿ ವರ್ಷಕ್ಕೆ ಕನಿಷ್ಠ 100 ರಥದ ಆಯೋಜಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸಲಿದೆ ಎಂದ ಅವರು, ಇತಿಹಾಸ ಪ್ರಸಿದ್ಧ ಬಾರ್ಕೂರು ಅಳುಪ ವಂಶದ ರಾಜಧಾನಿಯಾಗಿದ್ದು, ಪ್ರತಿದಿನವೂ ರಥೋತ್ಸವ ನಡೆಯುತ್ತಿದ್ದ ಉಲ್ಲೇಖ ಇವೆ ಎಂದರು.


ಬಾರ್ಕೂರನ್ನು ಪ್ರಮುಖ ಸಾಂಸ್ಕೃತಿಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ಜೊತೆಗೆ ಸ್ಥಳೀಯರನ್ನು ಅಲ್ಲಿನ ಮೂಲ ಸಂಸ್ಕೃತಿಗೆ ಕೊಂಡೊಯ್ಯುವ ಆಶಯ ಹೊಂದಲಾಗಿದೆ. ಅದಕ್ಕಾಗಿ ಸಮಗ್ರ ವರದಿ ಮತ್ತು ಕಾರ್ಯಯೋಜನೆ ರೂಪಿಸಲು ತಜ್ಞರ ಸಮಿತಿ ರಚಿಸಲಾಗುವುದು ಎಂದರು.


ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್.ಝಡ್ ನಿಯಮಗಳಿಂದ ತೊಂದರೆ ಉಂಟಾಗುತ್ತಿದೆ. ನೆರೆಯ ರಾಜ್ಯಗಳಾದ ತಮಿಳುನಾಡು ಹಾಗೂ ಕೇರಳ ಮಾದರಿಯಲ್ಲಿ ರೂಪಿಸಿರುವ ನಿಯಮಗಳನ್ನು ರಾಜ್ಯದಲ್ಲಿಯೂ ಜಾರಿಗೆ ತಂದಲ್ಲಿ ಕಡಲ ತೀರದಲ್ಲಿ ಪ್ರವಾಸೋದ್ಯಮಕ್ಕೆ  ಅನುಕೂಲವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.


ಶತಮಾನಗಳ ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು, ದಾಖಲೆಗಳ ಸಮೀಕ್ಷೆ ಕೈಗೊಂಡು ಅವುಗಳನ್ನು ಇಂದಿನ ತಂತ್ರಜ್ಞಾನದ ಮೂಲಕ ಶಾಶ್ವತವಾಗಿ ಉಳಿಸಲಾಗುತ್ತದೆ. ಹಸ್ತಪ್ರತಿಗಳ ಸಮೀಕ್ಷೆ, ಸಂರಕ್ಷಣೆ, ಡಿಜಿಟಲೀಕರಣ, ನೋಂದಣಿ, ಅನುವಾದ ಮೂಲಕ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ವೇದಿಕೆ ಮೂಲಕ ಜನರ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗುವುದು.


ತಾಳೆಗರಿ, ಹಳೆಯ ಹಸ್ತಪ್ರತಿಗಳು, ಇತರ ರೂಪಗಳಲ್ಲಿ ಬರೆಯಲ್ಪಟ್ಟ ಪ್ರಾಚೀನ ವಿಜ್ಞಾನ, ಸಾಹಿತ್ಯ, ವೈದ್ಯಕೀಯ ಹಾಗೂ ಧಾರ್ಮಿಕ ಜ್ಞಾನ ಸಂಗ್ರಹಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.


ಜಿಲ್ಲೆಯಲ್ಲಿ ಈವರೆಗೆ 6 ಸಾವಿರಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಪೋರ್ಟ್'ನಲ್ಲಿ ಡಿಜಿಟಲೀಕರಣಗೊಳಿಸಲಾಗಿದೆ. ಬಾಕಿ ಉಳಿದಿರುವ ಹಸ್ತಪ್ರತಿಗಳನ್ನು ಶೀಘ್ರದಲ್ಲಿಯೇ ಡಿಜಿಟಲ್'ಗೊಳಿಸಲು ಸೂಚಿಸಿದರು.


ಕೆಲವು ದ್ವೀಪಗಳು ಮತ್ತು ಬ್ಯಾಕ್‌ವಾಟರ್ ಪ್ರದೇಶಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು, ‘ಒನ್ ಸ್ಟೇಟ್, ಒನ್ ಡೆಸ್ಟಿನೇಶನ್’ ಯೋಜನೆಯಡಿ ಕಾಪು ಆಯ್ಕೆಯಾಗಿದೆ. ಮುಂದಿನ ದಿನಗಳಲ್ಲಿ ಬಾರ್ಕೂರನ್ನೂ ಈ ಯೋಜನೆಗೆ ಸೇರಿಸಲಾಗುವುದು ಎಂದರು.


ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಮಾತನಾಡಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳು, ಕಾಮಗಾರಿಗಳು ಹಾಗೂ ಪ್ರಸ್ತಾವನೆ ಬಗ್ಗೆ ತಿಳಿಸಿದರು.


ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಮಟ್ಟದ ಅಧಿಕಾರಿಗಳು ಮೊದಲಾದವರಿದ್ದರು.ಅದಕ್ಕೂ ಮುನ್ನ ಬಾರ್ಕೂರಿಗೆ ಭೇಟಿ ನೀಡಿದ ಸಚಿವರು ಅಲ್ಲಿನ ಐತಿಹಾಸಿಕ ಸ್ಥಳಗಳು, ಪಂಚಲಿಂಗೇಶ್ವರ ದೇವಳ ಮೊದಲಾದೆಡೆಗಳಿಗೆ ಭೇಟಿ ನೀಡಿದರು.