ಲೋಕಬಂಧು ನ್ಯೂಸ್ | ಮಂಗಳೂರು, ಮೇ 12
ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಹೋಗಬೇಡಿ, ಚಿನ್ನ ಖರೀದಿಸಬೇಡಿ, ವಾಹನಗಳಲ್ಲಿ ನಿಯಮಿತವಾಗಿ ಓಡಾಡಿ ಎಂದು ಹೇಳಿಕೆ ನೀಡಿರುವುದು ಬಾಲಿಶತನದ್ದು. ಇಂಥ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷಿರಲಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ಟೀಕಿಸಿದ್ದಾರೆ.
ದೇಶದಲ್ಲಿ ವಾಣಿಜ್ಯ ಗ್ಯಾಸ್ ಬೆಲೆ ಭಾರೀ ಏರಿಕೆಯಾಗಿದೆ. ಉದ್ಯಮ ವಲಯವೂ ದರ ಏರಿಕೆಯಿಂದ ಕಂಗಾಲಾಗಿದೆ. ರಸಗೊಬ್ಬರ ಕೊರತೆಯ ಮುನ್ಸೂಚನೆ ಸಿಕ್ಕಿದೆ. ಇಂಥ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ರೀತಿ ಹೇಳಿಕೆ ನೀಡಿರುವುದು ಜನತೆ ಮತ್ತು ಉದ್ಯಮ ವಲಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.
ಚಿನ್ನದ ದರ ಏರಿಕೆಯಿಂದ ವ್ಯವಹಾರಕ್ಕೆ ಹೊಡೆತ ಬಿದ್ದು ಸ್ವರ್ಣೋದ್ಯಮ ಕಂಗಾಲಾಗಿದೆ. ಖಾದ್ಯ ಎಣ್ಣೆಗಳ ದರವೂ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸುವಲ್ಲಿ ದೇಶದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಸರಕಾರ ವಿಫಲವಾಗಿದೆ. ಸರಕಾರಿ ವೆಚ್ಚದಲ್ಲಿ ಪದೇ ಪದೇ ವಿದೇಶ ಪ್ರವಾಸ ಮಾಡಿ ಸುದ್ದಿಯಲ್ಲಿರುವ ಮೋದಿ, ದೇಶದ ಜನರನ್ನು ವಿದೇಶ ಪ್ರವಾಸ ಮಾಡಬೇಡಿ ಎಂದು ಹೇಳುತ್ತಿರುವುದು ಕೇಂದ್ರದ ಮೋದಿ ಸರಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಡಾ. ಭಂಡಾರಿ ಕಿಡಿಕಾರಿದ್ದಾರೆ.
ಜಾಗತಿಕ ತಲ್ಲಣ, ಆರ್ಥಿಕ ವ್ಯವಸ್ಥೆಯಲ್ಲಿ ಏರುಪೇರಾದಾಗ ದೇಶದ ಜನರಲ್ಲಿ ಭರವಸೆಯ ಮಾತುಗಳಿಂದ ಸ್ಥೈರ್ಯ ತುಂಬುವುದು ಕೇಂದ್ರ ಸರಕಾರದ ಜವಾಬ್ದಾರಿ. ಅದು ಬಿಟ್ಟು ಈ ರೀತಿ ಜನರಲ್ಲಿ ಗೊಂದಲ, ಆತಂಕ ಸೃಷ್ಟಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
