ಲೋಕಬಂಧು ನ್ಯೂಸ್ ಉಡುಪಿ, ಮೇ 18
ನಮ್ಮ ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಶೇ.40ರಷ್ಟು 25 ವರ್ಷಕ್ಕಿಂತ ಕೆಳಗಿನ ಯುವ ಜನರಿದ್ದಾರೆ. ಅವರು ನಮ್ಮ ದೇಶದ ಆಸ್ತಿ. ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಉದ್ಯೋಗ ಕಲ್ಪಿಸುವುದು ಕೂಡಾ ನಮ್ಮ ಜವಾಬ್ದಾರಿ ಎಂದು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಹೇಳಿದರು.ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್‌ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯುತ್ತಿರುವ ಮಹಾರುದ್ರ ಯಾಗ ಪ್ರಯುಕ್ತ ಕೊಡವೂರಿನ ವಿಪ್ರಶ್ರೀ ಸಭಾಭವನದಲ್ಲಿ ಏರ್ಪಡಿಸಲಾದ ಬೃಹತ್ ಉದ್ಯೋಗ ಮೇಳವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಕಾರ್ಯಕ್ರಮದ ಜೊತೆ ಪ್ರಸಾದ್‌ರಾಜ್ ಕಾಂಚನ್ ಯುವಜನತೆಗೆ ಅನುಕೂಲವಾಗುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಉತ್ತಮ ಉದ್ಯೋಗ ಸಿಕ್ಕಿದಲ್ಲಿ ಯುವಜನತೆಯ ಭವಿಷ್ಯ ಕೂಡಾ ಉತ್ತಮವಾಗಿರಲು ಸಾಧ್ಯ.
ನಮ್ಮ ದೇಶದಲ್ಲಿ ಶೇ. 70ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಾರೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದರಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯ. ಅದರಲ್ಲೂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಲಿಂಗ ಸಮಾನತೆ ಸಾಧಿಸಬಹುದು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾರುದ್ರ ಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿರುವ ಉಡುಪಿ ಜಿಲ್ಲೆಯ ಯುವಜನತೆ ಸರಿಯಾದ ಉದ್ಯೋಗ ಸಿಗದೆ ಹೊರರಾಜ್ಯ, ಹೊರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಮ್ಮಲ್ಲಿನ ಪ್ರತಿಭೆಗಳಿಗೆ ನಮ್ಮಲ್ಲಿಯೇ ಉದ್ಯೋಗ ನೀಡುವುದರಿಂದ ನಮ್ಮ ಜಿಲ್ಲೆ ಆರ್ಥಿಕವಾಗಿ ಮತ್ತಷ್ಟು ಪ್ರಗತಿ ಸಾಧಿಸುತ್ತದೆ. ಈ ನಿಟ್ಟಿನಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
ಉದ್ಯೋಗಾವಕಾಶಗಳ ಜೊತೆಗೆ ಸ್ಥಳೀಯವಾಗಿ ಬೇಡಿಕೆ ಇರುವ ಉದ್ದಿಮೆಗಳ ಬಗ್ಗೆಯೂ ಯುವಜನತೆಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತದೆ. ಕರಾವಳಿಯಲ್ಲಿ ಇದೀಗ ಪ್ರವಾಸೋದ್ಯಮ ಕ್ಷೇತ್ರ ತುಂಬಾ ವೇಗವಾಗಿ ಬೆಳೆಯುತ್ತಿದ್ದು, ಅದರಲ್ಲಿ ವಿಫುಲ ಅವಕಾಶವೂ ಇದೆ. ಅದನ್ನು ನಮ್ಮ ಸ್ಥಳೀಯ ಯುವಜನತೆ ಬಳಸಿಕೊಂಡು ಅಭಿವೃದ್ಧಿ ಕಾಣಬೇಕು ಎಂದು ಕಾಂಚನ್ ಆಶಿಸಿದರು.
ಮಂಗಳೂರಿನ ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿಯ ಇಂಟರ್‌ನ್ಯಾಷನಲ್ ಕೊಲೆಬ್ರೆಷನ್ಸ್ ನಿರ್ದೇಶಕಿ ಡಾ.ದಿವ್ಯಾರಾಣಿ ಪ್ರದೀಪ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಉದ್ಯೋಗ ಮೇಳ ಪ್ರಸಾದ್‌ರಾಜ್ ಕಾಂಚನ್ ಕನಸು. ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತರಿಗೆ ಉದ್ಯೋಗ ಕಲ್ಪಿಸುವುದು ಇದರ ಉದ್ದೇಶ ಎಂದರು.
ಉದ್ಯೋಗ ಮೇಳದಲ್ಲಿ 70 ಕಂಪೆನಿಗಳು ಭಾಗವಹಿಸಿದ್ದು, ಸುಮಾರು 7 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ ಒದಗಿಸಲಿದೆ. ಇದರಲ್ಲಿ ಸಂಜೆಯ ವರೆಗೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವೇದಿಕೆಯಲ್ಲಿ ಎಚ್‌ಪಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಅಧ್ಯಕ್ಷ ಹರಿಪ್ರಸಾದ್ ರೈ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಉಪಸ್ಥಿತರಿದ್ದರು.
ಪ್ರಿಯಾ ನಿರೂಪಿಸಿ, ವಂದಿಸಿದರು.